ಇದು ಜಗತ್ತಿನ ಅತ್ಯಂತ ವಾಸಯೋಗ್ಯ ನಗರ...
ವಿಯೆನ್ನಾ: ಆಸ್ಟ್ರಿಯಾ ರಾಜಧಾನಿ ವಿಯೆನ್ನಾ, ಜಗತ್ತಿನ ಅತ್ಯಂತ ವಾಸಯೋಗ್ಯ ನಗರ ಎಂಬ ಪಟ್ಟವನ್ನು ಸತತ ಎರಡನೇ ವರ್ಷ ಉಳಿಸಿಕೊಂಡಿದೆ.
"ದಿ ಎಕನಾಮಿಸ್ಟ್" ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ವಿಯೆನ್ನಾ ಅಗ್ರ ರ್ಯಾಂಕಿಂಗ್ ಉಳಿಸಿಕೊಂಡಿದೆ. 2018ರವರೆಗೆ ಸತತ ಏಳು ಬಾರಿ ಮೆಲ್ಬೋರ್ನ್ ನಗರ ಈ ಪಟ್ಟವನ್ನು ಅಲಂಕರಿಸಿತ್ತು. ಮೆಲ್ಬೋರ್ನ್ ಬಳಿಕ ಸಿಡ್ನಿ, ಒಸಾಕಾ ಮತ್ತು ಕಾಲ್ಗ್ರೇ ನಂತರದ ಸ್ಥಾನಗಳಲ್ಲಿವೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಪ್ರತಿ ವರ್ಷ 140 ನಗರಗಳಿಗೆ ರ್ಯಾಂಕಿಂಗ್ ನೀಡುತ್ತದೆ. ಜೀವನ ಗುಣಮಟ್ಟ, ಅಪರಾಧ, ಸಾರಿಗೆ ಮೂಲ ಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಸೇವೆ ಲಭ್ಯತೆ, ರಾಜಕೀಯ ಹಾಗೂ ಆರ್ಥಿಕ ಸ್ಥಿರತೆ ಹೀಗೆ ಹಲವು ಮಾನದಂಡಗಳ ಅನುಸಾರ ಗರಿಷ್ಠ 100 ಅಂಕಗಳನ್ನು ನೀಡುವ ಆಧಾರದಲ್ಲಿ ರ್ಯಾಂಕಿಂಗ್ ನೀಡಲಾಗುತ್ತದೆ.
ಸುಗಮ ಸಾರ್ವಜನಿಕ ಸಾರಿಗೆ, ಆಹ್ಲಾದಕ್ಕೆ ಅಲ್ಪೈನ್ ಟ್ಯಾಪ್ ವಾಟರ್ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಜೀವನಕ್ಕೆ ಹೆಸರಾದ ವಿಯೆನ್ನಾ 100 ಅಂಕಗಳ ಪೈಕಿ 99.1 ಅಂಕ ಪಡೆದಿದೆ. ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕ, ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಾಗಿ ಮುಂದುವರಿದಿವೆ. ಅಗ್ರ 20 ಸ್ಥಾನಗಳ ಪೈಕಿ ಜಪಾನ್ ಎಂಟು ಸ್ಥಾನಗಳನ್ನು ಹೊಂದಿದ್ದರೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾ ಉಳಿದ ಸ್ಥಾನಗಳನ್ನು ಹಂಚಿಕೊಂಡಿವೆ.
ಇದೇ ಮೊದಲ ಬಾರಿಗೆ ಹವಾಮಾನ ಬದಲಾವಣೆ ಪರಿಣಾಮವನ್ನೂ ಮಾನದಂಡವಾಗಿ ಬಳಸಲಾಗಿದ್ದು, ಹೊಸದಿಲ್ಲಿ ಮತ್ತು ಕೈರೊ ಕಳಪೆ ವಾಯು ಗುಣಮಟ್ಟದ ಕಾರಣದಿಂದ 118 ಹಾಗು 125ನೇ ಸ್ಥಾನಕ್ಕೆ ಕುಸಿದಿವೆ.