ಅರಮನೆಯಿಂದ ಚಿನ್ನದ ಶೌಚಾಲಯ ಕದ್ದ ಕಳ್ಳರು!
ಲಂಡನ್, ಸೆ. 14: ಬ್ರಿಟನ್ನ ಬ್ಲೆನ್ಹೇಮ್ ಅರಮನೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ 18 ಕ್ಯಾರಟ್ ಚಿನ್ನದ ಶೌಚಾಲಯ ಆಸನವನ್ನು ಕಳ್ಳರ ತಂಡವೊಂದು ಶನಿವಾರ ಕದ್ದಿದೆ.
ಇಟಲಿಯ ಕಲಾಕಾರ ಮಾರಿಶಿಯೊ ಕ್ಯಾಟಲನ್ ನಿರ್ಮಿಸಿದ, ಸಂಪೂರ್ಣ ಸುಸ್ಥಿತಿಯಲ್ಲಿರುವ ಈ ಶೌಚಾಲಯ ಆಸನವನ್ನು ‘ಅಮೆರಿಕ’ ಎಂದು ಕರೆಯಲಾಗಿದೆ. ಅದನ್ನು ಒಮ್ಮೆ ನ್ಯೂಯಾರ್ಕ್ನ ಗುಗನ್ಹೇಮ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿತ್ತು ಹಾಗೂ ಸಾಲದ ರೂಪದಲ್ಲಿ ಅದನ್ನು ಪಡೆಯುವ ಕೊಡುಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ನೀಡಲಾಗಿತ್ತು.
ಆಕ್ಸ್ಫರ್ಡ್ಶಯರ್ನಲ್ಲಿರುವ 18ನೇ ಶತಮಾನದ ರಾಜ ಅರಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ 66 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಅರಮನೆಯಲ್ಲಿ ಕ್ಯಾಟಲನ್ ಕೃತಿಗಳ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಲಾಗಿತ್ತು.
‘‘ಕಳ್ಳರು ಶುಕ್ರವಾರ ರಾತ್ರಿ ಅರಮನೆಗೆ ನುಗ್ಗಿ ಶನಿವಾರ ಬೆಳಗ್ಗೆ ಸುಮಾರು 4:50ಕ್ಕೆ ಅಲ್ಲಿಂದ ಹೊರಟಿದ್ದಾರೆ. ಶೌಚಾಲಯ ಆಸನವನ್ನು ಕಟ್ಟಡಕ್ಕೆ ಜೋಡಿಸಿದ್ದರಿಂದ ಕಟ್ಟಡಕ್ಕೆ ಸಾಕಷ್ಟು ಹಾನಿಯಾಗಿದೆ ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ’’ ಎಂದು ಪೊಲೀಸರು ತಿಳಿಸಿದರು.