ಸೇನಾ ನೆಲೆಯಲ್ಲಿ 8 ಸಹೋದ್ಯೋಗಿಗಳನ್ನು ಕೊಂದ ರಶ್ಯ ಸೈನಿಕ
ಮಾಸ್ಕೋ (ರಶ್ಯ), ಅ. 25: ಸೈಬೀರಿಯದಲ್ಲಿರುವ ರಶ್ಯದ ಸೇನಾ ನೆಲೆಯೊಂದರಲ್ಲಿ ಸೈನಿಕನೊಬ್ಬ ಶುಕ್ರವಾರ ತನ್ನ ಸಹೋದ್ಯೋಗಿಗಳ ಮೇಲೆ ಗುಂಡಿನ ಸುರಿಮಳೆ ಹರಿಸಿದ್ದು ಎಂಟು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘‘ಸಹೋದ್ಯೋಗಿಗಳನ್ನು ಕೊಂದ ಸೈನಿಕನನ್ನು ಬಂಧಿಸಲಾಗಿದೆ’’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪೂರ್ವ ಸೈಬೀರಿಯದ ಚೀಟಾ ವಲಯದಲ್ಲಿರುವ ಸೇನಾ ನೆಲೆಯಲ್ಲಿ ಈ ಘಟನೆ ನಡೆದಿದೆ.
‘‘ವೈಯಕ್ತಿಕ ಕಾರಣಗಳಿಂದಾಗಿ ಹತಾಶೆಗೊಂಡು ಸೈನಿಕನು ಈ ಕೃತ್ಯವೆಸಗಿರಬಹುದು. ಆತನ ಸೇನಾ ಕರ್ತವ್ಯಕ್ಕೂ ಈ ಘಟನೆಗೂ ಸಂಬಂಧವಿಲ್ಲ’’ ಎಂದು ಪ್ರಾಥಮಿಕ ತನಿಖಾ ವರದಿಯನ್ನು ಉಲ್ಲೇಖಿಸಿ ಸಚಿವಾಲಯ ತಿಳಿಸಿದೆ.
ಘಟನೆ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಉಪ ರಕ್ಷಣಾ ಸಚಿವ ಆ್ಯಂಡ್ರೀ ಕರ್ಟಪೊಲೊವ್ ನೇತೃತ್ವದ ಸಮಿತಿಯೊಂದು ಸೇನಾ ನೆಲೆಗೆ ಹೊರಟಿದೆ.
Next Story