ಹೈಸ್ಕೂಲ್ನಲ್ಲಿ ಸಹಪಾಠಿಗಳನ್ನು ಕೊಂದಾತ ಆಸ್ಪತ್ರೆಯಲ್ಲಿ ಸಾವು
ಕ್ಯಾಲಿಫೋರ್ನಿಯ, ನ. 16: ದಕ್ಷಿಣ ಕ್ಯಾಲಿಫೋರ್ನಿಯದ ಹೈಸ್ಕೂಲೊಂದರಲ್ಲಿ, ತನ್ನ ಜನ್ಮದಿನದಂದು ಇಬ್ಬರು ಸಹಪಾಠಿಗಳನ್ನು ಕೊಂದು ಮೂವರನ್ನು ಗಾಯಗೊಳಿಸಿ ಅಂತಿಮವಾಗಿ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದ ಹದಿಹರಯದ ವಿದ್ಯಾರ್ಥಿಯು ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಲಾಸ್ ಏಂಜಲಿಸ್ ಕೌಂಟಿಯ ಶೆರಿಫ್ ಕಚೇರಿ ತಿಳಿಸಿದೆ.
ಬಾಲಕನು ತಲೆಗೆ ಗುಂಡು ಹಾರಿಸಿಕೊಂಡ ಬಳಿಕ, ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವನ ಹಿಂಸಾ ಕೃತ್ಯಕ್ಕೆ ಕಾರಣವೇನು ಎನ್ನುವುದು ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
‘‘ಸಾಗಸ್ ಹೈಸ್ಕೂಲ್ನಲ್ಲಿ ಜೂನಿಯರ್ ಆಗಿದ್ದ 16 ವರ್ಷದ ನಥಾನಿಯಲ್ ಟೆನೊಸೂಕ್ ಬರ್ಹೌಗೆ ತಲೆಗೆ ಸ್ವಯಂ ಹಾರಿಸಿಕೊಂಡ ಗುಂಡಿನ ಗಾಯಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವನು ಈಗ ಗಾಯ ಉಲ್ಬಣಗೊಂಡು ಕೊನೆಯುಸಿರೆಳೆದಿದ್ದಾನೆ. ಅವನ ಸಾವಿನ ಸಮಯದಲ್ಲಿ ತಾಯಿ ಅವರ ಜೊತೆಗಿದ್ದರು’’ ಎಂದು ಹೇಳಿಕೆ ತಿಳಿಸಿದೆ.
Next Story