ಚೀನಿ ವಿಜ್ಞಾನಿಗೆ 3 ವರ್ಷ ಜೈಲು
ಎಚ್ಐವಿ ನಿರೋಧಕ ವಂಶವಾಹಿ ಸುಧಾರಿತ ಶಿಶುಗಳ ಜನನ
file photo
ಬೀಜಿಂಗ್, ಡಿ. 30: ಜಗತ್ತಿನ ಮೊದಲ ವಂಶವಾಹಿ ಸುಧಾರಿತ (ಜೀನ್ ಎಡಿಟಡ್) ಶಿಶುಗಳ ಜನನಕ್ಕೆ ನಾನು ಕಾರಣ ಎಂದು ಹೇಳಿಕೊಂಡಿದ್ದ ವಿಜ್ಞಾನಿಗೆ, ಕಾನೂನುಬಾಹಿರ ವೈದ್ಯಕೀಯ ಚಟುವಟಿಕೆಗಳನ್ನು ನಡೆಸಿರುವುದಕ್ಕಾಗಿ ಚೀನಾದ ನ್ಯಾಯಾಲಯವೊಂದು ಸೋಮವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಏಡ್ಸ್ ರೋಗಕ್ಕೆ ಕಾರಣವಾಗುವ ಎಚ್ಐವಿ ಬಾಧಿಸದಂತೆ ವಂಶವಾಹಿ ಪರಿವರ್ತನೆಗೆ ಒಳಗಾದ ಅವಳಿ ಹೆಣ್ಣು ಶಿಶುಗಳು ಜನಿಸಿವೆ ಎಂದು ಘೋಷಿಸುವ ಮೂಲಕ ವಿಜ್ಞಾನಿ ಹೆ ಜಿಯಾಂಕುಯಿ ಕಳೆದ ವರ್ಷ ಜಾಗತಿಕ ಸಮುದಾಯವನ್ನು ಆಘಾತದಲ್ಲಿ ಕೆಡವಿದ್ದರು.
ಅವರಿಗೆ 30 ಲಕ್ಷ ಯುವಾನ್ (ಸುಮಾರು 3 ಕೋಟಿ ರೂಪಾಯಿ) ದಂಡವನ್ನೂ ವಿಧಿಸಲಾಗಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಂತಾನಾಭಿವೃದ್ಧಿಯ ಉದ್ದೇಶದಿಂದ ಕಾನೂನುಬಾಹಿರವಾಗಿ ಮಾನವ ಭ್ರೂಣದ ವಂಶವಾಹಿಯನ್ನು ಬದಲಿಸಿರುವುದಕ್ಕಾಗಿ ಶೆಂಝನ್ನ ನ್ಯಾಯಾಲಯವೊಂದು ಅವರಿಗೆ ಈ ಶಿಕ್ಷೆ ವಿಧಿಸಿದೆ.
ಅವರ ಇಬ್ಬರು ಸಹಾಯಕ ವಿಜ್ಞಾನಿಗಳಿಗೂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಝಾಂಗ್ ರೆನ್ಲಿ ಎಂಬವರಿಗೆ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಹಾಗೂ 10 ಲಕ್ಷ ಯುವಾನ್ (ಸುಮಾರು ಒಂದು ಕೋಟಿ ರೂಪಾಯಿ). ಇನ್ನೊಬ್ಬ ಸಹಾಯಕ ಕಿನ್ ಜಿನ್ಝೌಗೆ 18 ತಿಂಗಳ ಜೈಲುವಾಸ ಮತ್ತು 5 ಲಕ್ಷ ಯುವಾನ್ (ಸುಮಾರು 51 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ.
ಈ ಮೂವರು ವೈದ್ಯರಾಗಿ ಕೆಲಸ ಮಾಡಲು ಅರ್ಹತೆ ಪಡೆದುಕೊಂಡಿಲ್ಲ ಹಾಗೂ ಅವರು ಗೊತ್ತಿದ್ದೂ ಚೀನಾದ ನಿಯಮಾವಳಿಗಳು ಮತ್ತು ನೈತಿಕ ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ ಎಂದು ಕ್ಸಿನುವಾ ಹೇಳಿದೆ. ಒಳಗೆ ಬ್ಕಾಸ್
ಡಿಎನ್ಎಯಿಂದ ನಿರ್ದಿಷ್ಟ ವಂಶವಾಹಿಯನ್ನು ತೆಗೆದು ಹಾಕುವ ತಂತ್ರಜ್ಞಾನ
ವಿಜ್ಞಾನಿಗಳು ತಮ್ಮ ಸಂಶೋಧನೆಗೆ ಗಂಡ ಎಚ್ಐವಿ ಪಾಸಿಟಿವ್ ಆಗಿರುವ ದಂಪತಿಗಳನ್ನು ಆರಿಸಿಕೊಂಡಿದ್ದರು. ಇದು ‘ವ್ಯಕ್ತಿಗಳ ಖಾಸಗಿತನ’ದ ವಿಚಾರವಾಗಿರುವುದರಿಂದ ಸಂಶೋಧನೆಯನ್ನು ರಹಸ್ಯವಾಗಿ ನಡೆಸಲಾಗುತ್ತಿತ್ತು ಎಂದು ಕ್ಸಿನುವಾ ತಿಳಿಸಿದೆ.
ಈ ವಂಶವಾಹಿ-ಸುಧಾರಣೆ ಪ್ರಯೋಗಗಳಲ್ಲಿ ಇಬ್ಬರು ಮಹಿಳೆಯರು ಗರ್ಭಿಣಿಯಾಗಿದ್ದರು. ಒಬ್ಬ ಮಹಿಳೆ ಅವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿರುವುದು ಈಗಾಗಲೇ ವರದಿಯಾಗಿದೆ. ಆರಂಭದಲ್ಲಿ ಮೂರನೇ ಮಗುವಿನ ಉಲ್ಲೇಖವಿರಲಿಲ್ಲ.
2018ರ ನವೆಂಬರ್ನಲ್ಲಿ ಎಚ್ಐವಿಗೆ ನಿರೋಧಕ ಶಕ್ತಿ ಹೊಂದಿರುವ ಅವಳಿ ಹೆಣ್ಣು ಶಿಶುಗಳು ಜನಿಸಿವೆ ಎಂದು ಆ ವರ್ಷದ ನವೆಂಬರ್ನಲ್ಲಿ ಚೀನೀ ವಿಜ್ಞಾನಿ ಘೋಷಿಸಿದ್ದರು. ಈ ಶಿಶುಗಳು ಎಚ್ಐವಿ ಸೋಂಕಿಗೆ ಒಳಗಾಗದಂತೆ ಅವುಗಳ ಡಿಎನ್ಎಯನ್ನು ಬದಲಿಸಲಾಗಿದೆ. ಸಿಆರ್ಐಎಸ್ಪಿಆರ್ ಎಂಬ ತಂತ್ರಜ್ಞಾನ ಬಳಸಿ ನಿರ್ದಿಷ್ಟ ವಂಶವಾಹಿಯೊಂದನ್ನು ತೆಗೆದುಹಾಕುವ ಮೂಲಕ ಇದನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದರು.
ನನ್ನ ವಂಶವಾಹಿ-ಸುಧಾರಣೆ ತಂತ್ರಜ್ಞಾನದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಈ ಘೋಷಣೆಯ ಕೆಲವು ದಿನಗಳ ಬಳಿಕ ಹಾಂಕಾಂಗ್ನಲ್ಲಿ ನಡೆದ ಜೀವವೈದ್ಯಕೀಯ ಸಮ್ಮೇಳನವೊಂದರಲ್ಲಿ ಅವರು ಹೇಳಿದ್ದರು.
ತಂತ್ರಜ್ಞಾನ ಸುರಕ್ಷಿತವಲ್ಲ: ಅಮೆರಿಕ ವಿಜ್ಞಾನಿ
ಶಿಶುಗಳ ವಂಶವಾಹಿಯನ್ನು ಬದಲಿಸುವ ಸಂಶೋಧನೆಯು ಜಗತ್ತಿನಾದ್ಯಂತ ವಿಜ್ಞಾನಿಗಳನ್ನು ದಂಗುಬಡಿಸಿತ್ತು. ಸಂಶೋಧನೆಯು ನೈತಿಕತೆ ಕುರಿತು ಪ್ರಶ್ನೆಗಳನ್ನು ಎತ್ತಿರುವಂತೆಯೇ, ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಚೀನಾದ ಸಡಿಲ ಮೇಲುಸ್ತುವಾರಿಯನ್ನೂ ಬಹಿರಂಗಗೊಳಿಸಿತ್ತು.
‘‘ಈ ತಂತ್ರಜ್ಞಾನವು ಸುರಕ್ಷಿತವಲ್ಲ’’ ಎಂದು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದಲ್ಲಿ ವಂಶವಾಹಿ ಪ್ರೊಫೆಸರ್ ಆಗಿರುವ ಕಿರಣ್ ಮುಸುನುರು ಹೇಳಿದ್ದಾರೆ. ಸಿಆರ್ಐಎಸ್ಪಿಆರ್ ಮೊಲಿಕ್ಯುಲರ್ ‘ಕತ್ತರಿ’ಯು ಹೆಚ್ಚಿನ ಸಂದರ್ಭಗಳಲ್ಲಿ ಉದ್ದೇಶಿತ ವಂಶವಾಹಿಯ ಪಕ್ಕದ ವಂಶವಾಹಿಯನ್ನು ಕತ್ತರಿಸುತ್ತದೆ, ಇದರಿಂದ ಅನಿರೀಕ್ಷಿತ ರೂಪಾಂತರ ಉಂಟಾಗುತ್ತದೆ’’ ಎಂದು ಅವರು ಹೇಳಿದ್ದಾರೆ.
‘‘ಪರಿಣಾಮಗಳ ಬಗ್ಗೆ ನಿಮಗೆ ಚಿಂತೆಯಿಲ್ಲವಾದರೆ ಇದನ್ನು ಮಾಡುವುದು ತುಂಬಾ ಸುಲಭ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.