ಯುಎಇ : ಭಾರತೀಯನಿಗೆ ಕೊರೋನಾ ವೈರಸ್ ಸೋಂಕು ದೃಢ
ದುಬೈ : ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿರುವ ಭಾರತೀಯರೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗಲಿರುವುದು ದೃಢ ಪಟ್ಟಿದೆ. ಇದರಿಂದ ದೇಶದಲ್ಲಿ ಇಲ್ಲಿಯ ತನಕ ಎಂಟು ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ಇತ್ತೀಚೆಗೆ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ವ್ಯಕ್ತಿ ಜತೆ ಸಂಪರ್ಕ ಹೊಂದಿದ್ದ ಭಾರತೀಯನಿಗೆ ಈ ಸೋಂಕು ತಗಲಿದೆ ಎಂದು ಸಚಿವಾಲಯ ಹೇಳಿದೆ.
ಇದಕ್ಕೂ ಮೊದಲು ರವಿವಾರ ಸಚಿವಾಲಯ ನೀಡಿದ ಮಾಹಿತಿಯಂತೆ ಚೀನೀ ನಾಗರಿಕ ಹಾಗೂ ಒಬ್ಬ ಫಿಲಿಪ್ಪೀನ್ಸ್ ನಾಗರಿಕನಿಗೆ ಈ ಸೋಂಕು ತಗಲಿದೆ. ಅವರಿಗೆ ಎಲ್ಲಾ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಸರಕಾರ ತಿಳಿಸಿದೆ.
ಕಳೆದ ವಾರ ವುಹಾನ್ನಿಂದ ದುಬೈಗೆ ರಜೆ ಮೇಲೆ ಆಗಮಿಸಿದ್ದ ನಾಲ್ಕು ಮಂದಿಯ ಕುಟುಂಬಕ್ಕೆ ಕೊರೋನಾ ವೈರಸ್ ಸೋಂಕು ತಗಲಿತ್ತು. ಚೀನಾದಿಂದ ಆಗಮಿಸಿದ್ದ ಇನ್ನೊಬ್ಬರಿಗೂ ಈ ಸೋಂಕು ತಗಲಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಲ್ಲಿ ಈ ಮಾರಕ ಸೋಂಕಿಗೆ ಈಗಾಗಲೇ 1,016 ಮಂದಿ ಬಲಿಯಾಗಿದ್ದು 42,638 ಮಂದಿಗೆ ಈ ಸೋಂಕು ತಗಲಿದೆ.