ಸ್ಪೇನ್: ಇನ್ನೂ 932 ಸಾವು
ಮ್ಯಾಡ್ರಿಡ್ (ಸ್ಪೇನ್), ಎ. 3: ದೇಶದಲ್ಲಿ ಹೊಸದಾಗಿ 932 ಮಂದಿ ನೋವೆಲ್-ಕೊರೋನವೈರಸ್ಗೆ ಬಲಿಯಾಗಿದ್ದಾರೆ ಎಂದು ಸ್ಪೇನ್ ಶುಕ್ರವಾರ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ಈ ಸಾಂಕ್ರಾಮಿಕ ಮಹಮಾರಿಯಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 11,000ವನ್ನು ದಾಟಿದೆ.
ಕೊರೋನವೈರಸ್ ಸಾವಿನ ಸಂಖ್ಯೆಯಲ್ಲಿ ಇಟಲಿಯ ಬಳಿಕ ಎರಡನೇ ಸ್ಥಾನದಲ್ಲಿ ಸ್ಪೇನ್ ಇದೆ.
ಇಟಲಿ: ಮತ್ತೆ 760 ಮರಣ
ಇಟಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕದ ದಾಳಿಯಲ್ಲಿ 760 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದರೊಂದಿಗೆ ದೇಶದಲ್ಲಿ ಈವರೆಗೆ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ 13,915ಕ್ಕೆ ಏರಿದೆ ಎಂದು ಇಟಲಿಯ ನಾಗರಿಕ ರಕ್ಷಣಾ ಸಂಸ್ಥೆ ಗುರುವಾರ ತಿಳಿಸಿದೆ. ಇದಕ್ಕೂ ಒಂದು ದಿನ ಮೊದಲು ಇಟಲಿಯಲ್ಲಿ ಒಂದು ದಿನದ ಅವಧಿಯಲ್ಲಿ 727 ಮಂದಿ ಮೃತಪಟ್ಟಿದ್ದರು. ಇದಕ್ಕೆ ಹೋಲಿಸಿದರೆ, ಗುರುವಾರದ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ.
ದೇಶದಲ್ಲಿ ಹೊಸದಾಗಿ 4,668 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,15,242ಕ್ಕೆ ಏರಿದೆ. ಅದೇ ವೇಳೆ, ಗುರುವಾರದವರೆಗೆ 18,278 ಮಂದಿ ಸಂಪೂರ್ಣವಾಗಿ ಕೊರೋನವೈರಸ್ನಿಂದ ಗುಣಹೊಂದಿದ್ದಾರೆ.
55,000 ದಾಟಿದ ಜಾಗತಿಕ ಸಾವಿನ ಸಂಖ್ಯೆ
ನೋವೆಲ್-ಕೊರೋನವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಜಗತ್ತಿನಾದ್ಯಂತ ಶುಕ್ರವಾರ ರಾತ್ರಿ 9 ಗಂಟೆಯವರೆಗೆ 55,203 ಮಂದಿ ಮೃತಪಟ್ಟಿದ್ದಾರೆ. ಅದೇ ವೇಳೆ, 204 ದೇಶಗಳಲ್ಲಿ 10,41,119 ಮಂದಿ ಸಾಂಕ್ರಾಮಿಕದ ಸೋಂಕಿಗೆ ಒಳಗಾಗಿದ್ದಾರೆ.