ಸೋಂಕು ಕಡಿಮೆಯಾಗುತ್ತಿರುವ ದೇಶಗಳಲ್ಲಿ 2ನೇ ಹಂತದ ಸ್ಫೋಟದ ಅಪಾಯ
ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಜಿನೀವ (ಸ್ವಿಟ್ಸರ್ಲ್ಯಾಂಡ್), ಮೇ 26: ಕೊರೋನ ವೈರಸ್ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವ ದೇಶಗಳು, ಸಾಂಕ್ರಾಮಿಕದ ಹರಡುವಿಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ಕ್ಷಿಪ್ರವಾಗಿ ಸಡಿಲಗೊಳಿಸಿದರೆ ಆ ದೇಶಗಳಲ್ಲಿ ಎರಡನೇ ಹಂತದ ಸಾಂಕ್ರಾಮಿಕ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಸಿದೆ.
ಜಗತ್ತು ಈಗಲೂ ಮೊದಲ ಹಂತದ ಕೊರೋನ ವೈರಸ್ ಸ್ಫೋಟದ ಪರಿಣಾಮಗಳನ್ನೇ ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ. ಮೈಕ್ ರಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಲವು ದೇಶಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಮಧ್ಯ ಮತ್ತು ದಕ್ಷಿಣ ಅಮೆರಿಕ, ದಕ್ಷಿಣ ಏಶ್ಯ ಮತ್ತು ಆಫ್ರಿಕಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ನುಡಿದರು.
ಸಾಂಕ್ರಾಮಿಕಗಳು ಅಲೆಗಳ ರೂಪದಲ್ಲಿ ಒಂದರ ಬೆನ್ನಿಗೆ ಒಂದರಂತೆ ಬರುತ್ತವೆ ಎಂದು ಹೇಳಿದ ಅವರು, ಸಾಂಕ್ರಾಮಿಕದ ಮೊದಲ ಅಲೆಗಳ ತೀವ್ರತೆ ಕಡಿಮೆಯಾದ ಸ್ಥಳಗಳಲ್ಲಿ ಎರಡನೇ ಹಂತದ ಅಲೆಗಳು ಈ ವರ್ಷದ ಉತ್ತರಾರ್ಧದಲ್ಲಿ ಬರಬಹುದು ಎಂದರು. ಅದೂ ಅಲ್ಲದೆ, ಮೊದಲ ಹಂತದ ಅಲೆಗಳ ಪರಿಣಾಮಗಳನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಒಮ್ಮೆಲೇ ಸಡಿಲಗೊಳಿಸಿದರೆ ಮತ್ತೊಮ್ಮೆ ಸೋಂಕು ದರ ಹೆಚ್ಚುವ ಸಾಧ್ಯತೆಯಿದೆ ಎಂದು ಡಾ. ರಯಾನ್ ಎಚ್ಚರಿಸಿದರು.