ರೋಜರ್ ಸ್ಟೋನ್ ಕ್ರಿಮಿನಲ್ ಆಗಿಯೇ ಉಳಿಯುತ್ತಾರೆ: ಮುಲ್ಲರ್
ವಾಶಿಂಗ್ಟನ್, ಜು. 12: 2016ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ರ ಪ್ರಚಾರ ತಂಡವು ರಶ್ಯದೊಂದಿಗೆ ಸಂಪರ್ಕ ಹೊಂದಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಸಂಸತ್ತಿಗೆ ಸುಳ್ಳು ಹೇಳಿದ ಪ್ರಕರಣದಲ್ಲಿ ತನ್ನ ಗೆಳೆಯ ರೋಜರ್ ಸ್ಟೋನ್ ರ 40 ತಿಂಗಳ ಸೆರೆವಾಸವನ್ನು ಅಧ್ಯಕ್ಷ ಟ್ರಂಪ್ ಮನ್ನಾ ಮಾಡಿರಬಹುದು, ಆದರೆ ಅವರು ದೋಷಿ ಎಂಬುದಾಗಿ ಸಾಬೀತಾದ ಕ್ರಿಮಿನಲ್ ಆಗಿಯೇ ಉಳಿಯುತ್ತಾರೆ ಎಂದು ಮಾಜಿ ವಿಶೇಷ ವಕೀಲ ರಾಬಟ್ ಮುಲ್ಲರ್ ಶನಿವಾರ ಹೇಳಿದ್ದಾರೆ.
ಟ್ರಂಪ್ ರ ದೀರ್ಘಕಾಲೀನ ಗೆಳೆಯ, 67 ವರ್ಷದ ಸ್ಟೋನ್ ತನ್ನ ಜೈಲು ಶಿಕ್ಷೆ ಅವಧಿಯನ್ನು ಮಂಗಳವಾರದಿಂದ ಆರಂಭಿಸಬೇಕಾಗಿತ್ತು.
ಟ್ರಂಪ್ ಪ್ರಚಾರ ತಂಡವು ರಶ್ಯದೊಂದಿಗೆ ಶಾಮೀಲಾಗಿತ್ತು ಎಂಬ ಆರೋಪದ ಬಗ್ಗೆ ನಾನು ನಡೆಸಿರುವ ತನಿಖೆಯು ಅತ್ಯಂತ ಮಹತ್ವದ್ದಾಗಿತ್ತು ಎಂಬುದಾಗಿ ‘ದ ವಾಶಿಂಗ್ಟನ್ ಪೋಸ್ಟ್ ‘ ಪತ್ರಿಕೆಯಲ್ಲಿ ಸಂಪಾದಕೀಯ ಪುಟದಲ್ಲಿ ಬರೆದ ಲೇಖನವೊಂದರಲ್ಲಿ ಮುಲ್ಲರ್ ಹೇಳಿದ್ದಾರೆ. ಟ್ರಂಪ್ ಮತ್ತು ಅವರ ಜೊತೆ ಕೆಲಸ ಮಾಡಿದವರ ವಿರುದ್ಧ ತಾನು ಹಗೆ ಸಾಧಿಸಲು ಹೊರಟಿದ್ದೇನೆ ಎಂಬ ಶ್ವೇತಭವನದ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.