2021ರ ಆರಂಭಕ್ಕಿಂತ ಮೊದಲು ಕೊರೋನ ಲಸಿಕೆ ನಿರೀಕ್ಷಿಸುವಂತಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 23: ಜಗತ್ತಿನ ವಿವಿಧ ಭಾಗಗಳಲ್ಲಿ ಸಂಶೋಧಕರು ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ ಹಾಗೂ ಹಲವಾರು ಸಂಭಾವ್ಯ ಲಸಿಕೆಗಳು ಕೊನೆಯ ಹಂತದ ಪ್ರಯೋಗಗಳಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮಗಳ ಮುಖ್ಯಸ್ಥ ಮೈಕ್ ರಯಾನ್ ಬುಧವಾರ ಹೇಳಿದ್ದಾರೆ. ಆದರೆ, ಲಸಿಕೆಯ ಮೊದಲ ಬಳಕೆಯನ್ನು 2021ರ ಮೊದಲ ಭಾಗಕ್ಕಿಂತ ಮೊದಲು ನಿರೀಕ್ಷಿಸುವಂತಿಲ್ಲ ಎಂದು ಅವರು ನುಡಿದರು.
ಯಶಸ್ವಿ ಲಸಿಕೆಯ ನ್ಯಾಯೋಚಿತ ವಿತರಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೆಲಸ ಮಾಡುತ್ತಿದೆ ಎಂದು ಹೇಳಿದ ಅವರು, ಆದರೆ, ಈ ಅವಧಿಯಲ್ಲಿ ವೈರಸ್ನ ಹರಡುವಿಕೆಯನ್ನು ತಡೆಯಬೇಕು ಎಂದು ಹೇಳಿದರು.
ದೈನಂದಿನ ಜಾಗತಿಕ ಸೋಂಕು ಪ್ರಕರಣಗಳು ಪ್ರತಿದಿನವೂ ದಾಖಲೆ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
‘‘ನಾವು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಹಲವು ಸಂಭಾವ್ಯ ಲಸಿಕೆಗಳು ಈಗ ಮೂರನೇ ಹಂತದ ಪ್ರಯೋಗಗಳಲ್ಲಿವೆ. ರೋಗನಿರೋಧಕ ಪ್ರತಿಕ್ರಿಯೆಯನ್ನು ಸೃಷ್ಟಿಸುವಲ್ಲಿ ಅವುಗಳ ಪೈಕಿ ಈವರೆಗೆ ಯಾವುದೂ ವಿಫಲವಾಗಿಲ್ಲ’’ ಎಂದರು.