ಅಮೆರಿಕ: ಕಡಿವಾಣವಿಲ್ಲದ ಕೊರೋನ; ಒಂದೇ ದಿನದಲ್ಲಿ 68,612 ಮಂದಿಗೆ ಸೋಂಕು
ವಾಶಿಂಗ್ಟನ್,ಜು.26: ಶನಿವಾರದಂದು ಕಳೆದ 24 ತಾಸುಗಳಲ್ಲಿ ಅಮೆರಿಕದಲ್ಲಿ ಕೊರೋನ ವೈರಸ್ ಸೋಂಕಿನ 68,212 ಪ್ರಕರಣಗಳು ವರದಿಯಾಗಿರುವುದಾಗಿ ಜಾನ್ಹಾಪ್ಕಿನ್ಸ್ ವಿವಿ ವರದಿ ಮಾಡಿದೆ. 1,067 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,46,391ಕ್ಕೇರಿದೆ.
ಜಗತ್ತಿನಲ್ಲೇ ಕೊರೋನ ಸೋಂಕಿನಿಂದ ಅತ್ಯಧಿಕವಾಗಿ ಬಾಧಿತವಾದ ರಾಷ್ಟ್ರವಾದ ಅಮೆರಿಕದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 41,74,437ಕ್ಕೇರಿದೆ. ಅಮೆರಿಕದಲ್ಲಿ ಪ್ರಸಕ್ತ ದಕ್ಷಿಣ ಹಾಗೂ ಪಶ್ಚಿಮ ಭಾಗದ ರಾಜ್ಯಗಳಾದ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಅಲಬಾಮ ಹಾಗೂ ಫ್ಲೋರಿಡಾಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯುಂಟಾಗಿದೆ. ಕಳೆದ 12 ದಿನಗಳಿಂದ ಅಮೆರಿಕದಲ್ಲಿ ಪ್ರತಿ ದಿನವೂ 60 ಸಾವಿರಕ್ಕೂ ಅಧಿಕ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಪ್ರತಿದಿನವೂ 1 ಸಾವಿರಕ್ಕೂ ಅಧಿಕ ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ.
Next Story