ಲಿಫ್ಟ್ನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ
ಚೀನಾದಲ್ಲಿ ಇಬ್ಬರು ಭಾರತೀಯರ ಬಂಧನ
ಬೀಜಿಂಗ್,ಜು.10: ಇಲ್ಲಿನ ಹೊಟೇಲೊಂದರ ಲಿಫ್ಟ್ನಲ್ಲಿ ತೈವಾನ್ನ ಪ್ರವಾಸಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಭಾರತೀಯರನ್ನು ಚೀನಾದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರೂ ಹರ್ಯಾಣದವರಾಗಿದ್ದು, ಚಹಾ ಉತ್ಪಾದಕ ಕಂಪೆನಿಯೊಂದರ ಆಹ್ವಾನದ ಮೇರೆಗೆ ಚೀನಾಕ್ಕೆ ಭೇಟಿ ನೀಡಿದ್ದ ವರ್ತಕರ ಗುಂಪಿನ ಸದಸ್ಯರಾಗಿದ್ದರು. ಜುಲೈ 7ರಿಂದು ಇವರಿಬ್ಬರೂ ಲಿಫ್ಟ್ ಒಂದರಲ್ಲಿ ತೈವಾನ್ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರೆನ್ನಲಾಗಿದೆ.
ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬೀಜಿಂಗ್ನ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಲಿಫ್ಟ್ನಲ್ಲಿದ್ದ ಸಿಸಿಟಿವಿಯಲ್ಲಿ ಆರೋಪಿಗಳು ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯಗಳು ದಾಖಲಾಗಿವೆ.ಸಿಸಿಟಿವಿಯಲ್ಲಿ ಇವರಿಬ್ಬರೂ ಯುವತಿಯ ಜೊತೆ ಬಲವಂತವಾಗಿ ಫೋಟೋ ತೆಗೆಸಿಕೊಂಡು, ಆನಂತರ ಆಕೆಯನ್ನು ಲಿಫ್ಟ್ನೊಳಗೆ ಎಳೆದೊಯ್ಯುತ್ತಿರುವ ದೃಶ್ಯಗಳು ದಾಖಲಾಗಿವೆ.
ಲಿಫ್ಟ್ನಲ್ಲಿ ಆರೋಪಿಗಳು ಆಕೆಯ ಅತ್ಯಾಚಾರಕ್ಕೆ ಯತ್ನಿಸಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಯುವತಿಯು ತೀವ್ರ ಪ್ರತಿರೋಧವನ್ನು ಒಡ್ಡಿದಳೆನ್ನಲಾಗಿದೆ. ಲಿಫ್ಟ್ 10ನೆ ಅಂತಸ್ತಿಗೆ ಬಂದಾಗ ಯುವತಿ ಇವರ ಕೈಯಿಂದ ಪಾರಾಗಿ ಲಿಫ್ಟ್ನಿಂದ ಹೊರಬಂದಳು. ಆನಂತರ ಬೀಜಿಂಗ್ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ಇಬ್ಬರಿಗೂ ಜುಲೈ 14ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಆನಂತರ ಅವರನ್ನು ಬಿಡುಗಡೆಗೊಳಿಸಲಾಗುವುದೇ ಅಥವಾ ಭಾರತಕ್ಕೆ ಗಡಿಪಾರು ಮಾಡಲಾಗುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವೆಂದು ಮೂಲಗಳು ತಿಳಿಸಿವೆ.