ಅಜ್ಜನೇ ಗಂಡನಾದಾಗ! : ಗೊತ್ತಾಗುವಾಗ ತಡವಾಯಿತು
ವಾಶಿಂಗ್ಟನ್, ಅ. 3: 24 ವರ್ಷದ ಅಮೆರಿಕದ ಮಹಿಳೆಯೊಬ್ಬರು ಇತ್ತೀಚೆಗೆ ‘ಜೀವಮಾನದ ಆಘಾತ’ವೊಂದಕ್ಕೆ ಒಳಗಾದರು! ತನ್ನ 68 ವರ್ಷದ ಗಂಡ ಬೇರೆ ಯಾರೂ ಅಲ್ಲ, ತನ್ನ ಅಜ್ಜನೇ ಎಂಬುದನ್ನು ಅವರು ಇತ್ತೀಚೆಗೆ ಪತ್ತೆಹಚ್ಚಿದ್ದರು!!
ಫ್ಲೋರಿಡದ ಮಯಾಮಿಯ ಗೋಲ್ಡನ್ ಬೀಚ್ ನಿವಾಸಿಗಳಾದ ಗಂಡ-ಹೆಂಡತಿ ಮದುವೆಯಾಗಿ ಮೂರು ತಿಂಗಳಷ್ಟೇ ಆಗಿದೆ. ಇತ್ತೀಚೆಗೆ ಗಂಡನ ಫೋಟೊ ಆಲ್ಬಮ್ ನೋಡಿದಾಗ ಈ ವಿಷಯ ಹೆಂಡತಿಗೆ ಗೊತ್ತಾಗಿದೆ.
ಗಂಡನ ಮೊದಲ ಮದುವೆಯಿಂದ ಹುಟ್ಟಿದ ಮಕ್ಕಳ ಚಿತ್ರಗಳು ಆಲ್ಬಂನಲ್ಲಿದ್ದವು. ಆ ಮಕ್ಕಳ ಪೈಕಿ ಒಬ್ಬರು ಮಹಿಳೆಯ ಸ್ವಂತ ತಂದೆ ಎಂದು ‘ಫ್ಲೋರಿಡ ಸನ್ ಪೋಸ್ಟ್’ ವರದಿ ಮಾಡಿದೆ.
ಮೊದಲ ಹೆಂಡತಿ ತನ್ನ ಗಂಡನನ್ನು ತೊರೆದು ತನ್ನ ಮಕ್ಕಳನ್ನು ಕರೆದುಕೊಂಡು ಯಾವುದೋ ಬೇರೆ ಊರಿಗೆ ಹೋದಾಗ ಆ ವ್ಯಕ್ತಿ ಏಕಾಂಗಿಯಾದರು.
ಬಳಿಕ ಅವರು ಎರಡನೆ ಮದುವೆಯಾಗಿ ಹಲವು ಮಕ್ಕಳನ್ನು ಪಡೆದರು. ಆ ಮದುವೆ ಡಿವೋರ್ಸ್ನಲ್ಲಿ ಕೊನೆಗೊಂಡಿತು. ಈ ಘಟನೆ ಅವರ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಿತು. ಎರಡು ವರ್ಷಗಳ ಬಳಿಕ ಲಾಟರಿಯಲ್ಲಿ ಅವರು ಹಲವು ಮಿಲಿಯ ಡಾಲರ್ ಬಹುಮಾನ ಗೆದ್ದರು.
2015ರಲ್ಲಿ ಅವರು ಮೂರನೆ ಮದುವೆಯಾಗಲು ಹೊರಟರು. ಇದಕ್ಕಾಗಿ ಸ್ಥಳೀಯ ಡೇಟಿಂಗ್ ಏಜನ್ಸಿಯೊಂದರಲ್ಲಿ ನೋಂದಾಯಿಸಿಕೊಂಡರು. ಮಹಿಳೆಯ ಫೋಟೊವನ್ನು ನೋಡಿ ಹೊಟೇಲೊಂದರಲ್ಲಿ ಭೇಟಿಯಾದರು.
ಗರ್ಭಿಣಿಯಾದ ಹಿನ್ನೆಲೆಯಲ್ಲಿ ಮಹಿಳೆಯ ತಂದೆ (ಗಂಡನ ಮಗ) ಆಕೆಯನ್ನು ಮನೆಯಿಂದ ಹೊರದಬ್ಬಿದರು. ಬಳಿಕ ಇಬ್ಬರು ಮದುವೆಯಾಗಿ ಜೊತೆಗೆ ವಾಸಿಸಿದರು.
ಆದಾಗ್ಯೂ, ಈ ಬೆಳವಣಿಗೆಯಿಂದ ಇಬ್ಬರೂ ಕಂಗೆಟ್ಟಿಲ್ಲ. ಅಜ್ಜ-ಮೊಮ್ಮಗಳು ಗಂಡ-ಹೆಂಡತಿಯರಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.