ಜರ್ಮನಿ : ಬಾಂಬ್ ಸಂಚಿನ ಆರೋಪಿಯನ್ನು ಹಿಡಿದು ಕೊಟ್ಟ ವಲಸಿಗರು
ಬರ್ಲಿನ್, ಅ.12: ಬಾಂಬ್ ಸಂಚಿನ ಆರೋಪಿಯೊಬ್ಬನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಮೂವರು ವಲಸಿಗರನ್ನು ಜರ್ಮನಿಯಲ್ಲಿ ಹೀರೋಗಳೆಂಬಂತೆ ಬಿಂಬಿಸಲಾಗಿದೆ. ಈ ಘಟನೆ ಜರ್ಮನಿಯ ಪೂರ್ವದಲ್ಲಿರುವ ನಗರವಾದ ಲೀಪ್ಝಿಗ್ ನಿಂದ ವರದಿಯಾಗಿದೆ.
ಆರೋಪಿ ಜಬೇರ್ ಅಲ್-ಬಕ್ರ್ (22) ಎಂಬವನನ್ನು ಕಟ್ಟಿ ಹಾಕಿದ ವಲಸಿಗರುಪೊಲೀಸರಿಗೆ ಮಾಹಿತಿ ನೀಡಿದ್ದರು, ಜಬೇರ್ ಎರಡು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಅಲೆದಾಡುತ್ತಿದ್ದನು. ಅಪಾರ್ಟುಮೆಂಟ್ ಒಂದರಲ್ಲಿ ಪೊಲೀಸರು ದಾಳಿಯ ವೇಳೆ ಸ್ಫೋಟಕಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತನಿಗಾಗಿ ಹುಡುಕಾಟ ನಡೆದಿತ್ತು.
ಆರೋಪಿಯನ್ನು ಬಂಧಿಸುವಲ್ಲಿ ಸಹಾಯ ಮಾಡಿದ ಮೂವರು ಸಿರಿಯನ್ನರ ಗುರುತನ್ನು ಪೊಲೀಸರು ಅವರಿಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ಬಹಿರಂಗಪಡಿಸಿಲ್ಲ. ತನಿಖಾಕಾರರ ಪ್ರಕಾರ ಆರೋಪಿ ಜಬೇರ್ ಜರ್ಮನಿಯಲ್ಲಿ ಆಶ್ರಯ ಪಡೆದ 8.9 ಲಕ್ಷ ಮಂದಿಯಲ್ಲಿ ಒಬ್ಬನಾಗಿ ಕಳೆದ ವರ್ಷ ದೇಶಕ್ಕೆ ಆಗಮಿಸಿದ್ದರೂ ಆತನಿಗೆ ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಸಂಬಂಧವಿತ್ತು ಹಾಗೂ ಬರ್ಲಿನ್ ವಿಮಾನ ನಿಲ್ದಾಣ ಮುಂತಾದ ಪ್ರಮುಖ ಸ್ಥಳಗಳನ್ನು ತನ್ನ ಗುರಿಯಾಗಿಸಿದ್ದ ಎಂದು ತನಿಖಾಕಾರರು ಶಂಕಿಸಿದ್ದಾರೆ.
ಮೂಲಗಳ ಪ್ರಕಾರ ಈಗ ಹೀರೋಗಳೆಂದು ಗುರುತಿಸಲ್ಪಟ್ಟಿರುವ ಸಿರಿಯನ್ ವಲಸಿಗರು ಜಬೇರ್ ನನ್ನು ಮೊದಲು ಭೇಟಿಯಾದಾಗ ಆತ ಬಾಂಬ್ ಸಂಚಿನ ಆರೋಪಿಯೆಂದು ಅವರಿಗೆ ತಿಳಿದಿರಲಿಲ್ಲವಾದುದರಿಂದ ಅವರು ಆತನಿಗೆ ಉಳಿದುಕೊಳ್ಳಲು ಸ್ಥಳವಿಲ್ಲವೆಂದು ಸ್ನೇಹಿತನೊಬ್ಬನ ಅಪಾರ್ಟುಮೆಂಟಿಗೆ ಕರೆದೊಯ್ದಿದ್ದರು. ಕೊನೆಗೆ ಫೇಸ್ ಬುಕ್ ನಲ್ಲಿ ಪೊಲೀಸರ ನೋಟಿಸ್ ನೋಡಿ ಈತನೇ ಆ ಶಂಕಿತನೆಂದು ತಿಳಿದು ಆತನನ್ನು ವೈರುಗಳಿಂದ ಕಟ್ಟಿ ಹಾಕಿದ್ದರು. ಆಗ ಆತ ಅವರಿಗೆ ಹಣದ ಆಮಿಷ ಒಡ್ಡಿದನಾದರೂ ತಮಗೆ ಆಶ್ರಯ ನೀಡಿದ ಜರ್ಮನ್ನರಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅವರು ಪೊಲೀಸರಿಗೆ ಮಾಹಿತಿ ನೀಡಿ ಆತನ ಬಂಧನಕ್ಕೆ ಸಹಕರಿಸಿದ್ದರು.