ಟ್ರಂಪ್ರನ್ನು ವೇದಿಕೆಯಿಂದ ಕೆಳಗೆ ಕರೆದುಕೊಂಡು ಹೋದ ಭದ್ರತಾ ಸಿಬ್ಬಂದಿ
ರೆನೊ, ನ. 6: ಶನಿವಾರ ರಾತ್ರಿ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ರನ್ನು ಭದ್ರತಾ ಅಧಿಕಾರಿಗಳು ಸುತ್ತುವರಿದು ಒಮ್ಮಿಂದೊಮ್ಮೆಲೆ ವೇದಿಕೆಯಿಂದ ಕೆಳಗೆ ಕರೆದುಕೊಂಡು ಹೋದ ಘಟನೆ ನಡೆದಿದೆ. ಆದಾಗ್ಯೂ, ಕೆಲವು ನಿಮಿಷಗಳ ಬಳಿಕ ಮತ್ತೆ ವೇದಿಕೆಗೆ ಬಂದ ಟ್ರಂಪ್ ತನ್ನ ಭಾಷಣವನ್ನು ಮುಕ್ತಾಯಗೊಳಿಸಿದರು.ಟ್ರಂಪ್ ಭಾಷಣ ಮಾಡುತ್ತಿದ್ದ ಕೋಣೆಯ ಮುಂಭಾಗದಲ್ಲಿ ಏನೋ ತೊಂದರೆ ಕಾಣಿಸಿಕೊಂಡ ಬಳಿಕ ಈ ಘಟನೆ ನಡೆದಿದೆ.ಟ್ರಂಪ್ ಸಭಿಕರತ್ತ ನೋಡಲು ತನ್ನ ಕೈಯನ್ನು ಕಣ್ಣಿನ ಮೇಲ್ಭಾಗದಲ್ಲಿ ಇರಿಸಿದರು.
ಅವರು ಹಾಗೆ ಮಾಡುವಾಗ ಓರ್ವ ಭದ್ರತಾ ಅಧಿಕಾರಿ ಟ್ರಂಪ್ರ ಪಕ್ಕಕ್ಕೆ ಜಿಗಿದು ವೇದಿಕೆಯ ಕೆಳಕ್ಕೆ ಕರೆದುಕೊಂಡು ಹೋದರು.ಎದುರು ಭಾಗದಲ್ಲಿದ್ದ ಜನರು ಒಮ್ಮೆಲೆ ಚದುರಿದರು. ಅದೇ ವೇಳೆ, ಭದ್ರತಾ ಸಿಬ್ಬಂದಿ ತಡೆಬೇಲಿಯನ್ನು ಹಾರಿ ಓರ್ವ ವ್ಯಕ್ತಿಯನ್ನು ಹಿಡಿದುಕೊಂಡರು.ಬಳಿಕ ಯಾವುದೇ ಸಮಸ್ಯೆಯಿಲ್ಲದೆ ಟ್ರಂಪ್ ತನ್ನ ಭಾಷಣವನ್ನು ಮುಗಿಸಿದರು. ಆದರೆ, ಅಲ್ಲಿ ಏನು ಸಂಭವಿಸಿತು ಎನ್ನುವುದು ತಕ್ಷಣಕ್ಕೆ ತಿಳಿದಿಲ್ಲ.