ಆಸ್ಟ್ರೇಲಿಯ: ಪಾದಚಾರಿಗಳ ಮೇಲೆ ಹರಿದ ಕಾರು
3 ಸಾವು; 15ಕ್ಕೂ ಅಧಿಕ ಮಂದಿಗೆ ಗಾಯ
ಸಿಡ್ನಿ, ಜ. 20: ಆಸ್ಟ್ರೇಲಿಯದ ಎರಡನೆ ಅತಿದೊಡ್ಡ ನಗರ ಮೆಲ್ಬರ್ನ್ನಲ್ಲಿ ವ್ಯಕ್ತಿಯೊಬ್ಬ ಶುಕ್ರವಾರ ತನ್ನ ಕಾರನ್ನು ಉದ್ದೇಶಪೂರ್ವಕವಾಗಿ ಪಾದಚಾರಿಗಳ ಮೇಲೆ ಹಾಯಿಸಿದ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಳಿಕ ಪೊಲೀಸರು ತಮ್ಮ ವಾಹನವನ್ನು ಹಂತಕನ ಕಾರಿಗೆ ಢಿಕ್ಕಿ ಹೊಡೆಸಿ, ಚಾಲಕನ ಕೈಗೆ ಗುಂಡು ಹಾರಿಸಿದರು. 26 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ವ್ಯಕ್ತಿಯ ಕಾರನ್ನು ಪೊಲೀಸ್ ವಾಹನಗಳು ಬೆಂಬತ್ತಿದಾಗ, ಹಂತಕನು ಅಡ್ಡಾದಿಡ್ಡಿಯಾಗಿ ಕಾರನ್ನು ಚಲಾಯಿಸಿ ಪಾದಚಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಹಾಯಿಸಿದನು ಎಂದು ವಿಕ್ಟೋರಿಯ ರಾಜ್ಯದ ಪೊಲೀಸರು ತಿಳಿಸಿದರು.
''ನಾವು ಈ ಘಟನೆಯನ್ನು ಭಯೋತ್ಪಾದಕ ಕೃತ್ಯವಾಗಿ ನೋಡುವುದಿಲ್ಲ'' ಎಂದು ವಿಕ್ಟೋರಿಯ ರಾಜ್ಯದ ಪೊಲೀಸ್ ಕಮಿಶನರ್ ಗ್ರಹಾಂ ಆ್ಯಶ್ಟನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
Next Story