ಮನೆಗೆ ಹಿಂದಿರುಗಿದಾಗ 5 ವರ್ಷದ ಪುತ್ರನ ತುಂಟತನ ಕಂಡು ಬೆಚ್ಚಿಬಿದ್ದ ತಂದೆ!
ಚೀನಾ, ಮೇ 23: ಬೆಲೆಬಾಳುವ ವಸ್ತುಗಳು ಕೈಗೆ ಸಿಗುವ ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬಾರದು ಎನ್ನುವುದಕ್ಕೆ ಈ ಸುದ್ದಿ ಒಳ್ಳೆಯ ಉದಾಹರಣೆ. ಚೀನಾದ ಶಾಂಡೋಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಗಾವೋ ಎಂಬವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದ ವೇಳೆ ಅವರ 5 ವರ್ಷದ ಪುತ್ರ ಆಘಾತಕಾರಿ ಸಾಹಸವೊಂದನ್ನು ನಡೆಸಿದ್ದ. ಮಗನ ತುಂಟಾಟಕ್ಕೆ ಅಳಬೇಕೋ ಅಥವಾ ಗದರಬೇಕೋ ಒಂದೂ ಗೊತ್ತಾಗದೇ ಗಾವ್ ಸುಮ್ಮನೆ ನಿಲ್ಲಬೇಕಾಯಿತು.
ಈ 5 ವರ್ಷದ ಪುಟಾಣಿ ತಂದೆ ಕೂಡಿಟ್ಟಿದ್ದ 4,70,000 ರೂ. ಮೌಲ್ಯದ ನೋಟುಗಳನ್ನು ಆಟವಾಡುತ್ತಾ ಹರಿದುಹಾಕಿದ್ದ!. ಕೈಗೆ ಸಿಗುವ ಜಾಗದಲ್ಲೇ ಹಣ ಇದ್ದುದರಿಂದ ಆಟವಾಡುತ್ತಾ ಈ ಪೋರ ಅರಿವಿಲ್ಲದೆ ನೋಟುಗಳನ್ನು ತುಂಡುತುಂಡುಗಳಾಗಿ ಹರಿದುಹಾಕಿದ್ದ.
ಇದರಿಂದ ಕಂಗಾಲಾದ ಗಾವ್ ಹರಿದಿದ್ದ ನೋಟುಗಳನ್ನು ಮತ್ತೆ ಜೋಡಿಸಲು ಪ್ರಯತ್ನಿಸಿದರಾದರೂ ಚೂರುಚೂರಾಗಿದ್ದ ಕೆಲ ನೋಟುಗಳನ್ನು ಮರುಜೋಡಿಸುವುದು ಅವರಿಗೆ ಸಾಧ್ಯವಾಗಿಲ್ಲ.
“ಈ ಕಾರಣಕ್ಕಾಗಿ ಮಗುವನ್ನು ನಾನು ದೂರುವುದಿಲ್ಲ. ಅವನಿನ್ನೂ ಚಿಕ್ಕವನು” ಎಂದು ಗಾವ್ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.