ಕ್ಷುದ್ರಗ್ರಹ ಯಾವುದೇ ಕ್ಷಣ ಭೂಮಿಗೆ ಅಪ್ಪಳಿಸಬಹುದು:ಪರಿಣತರ ಎಚ್ಚರಿಕೆ
ಲಂಡನ್, ಜೂ. 21: ಭೂಮಿಗೆ ಕ್ಷುದ್ರಗ್ರಹಗಳು ಯಾವಾಗ ಬೇಕಾದರೂ ಅಪ್ಪಳಿಸಬಹುದು ಹಾಗೂ ಇದು ಸಂಭವಿಸಿದಾಗ ಪ್ರಮುಖ ನಗರಗಳು ನಾಶಗೊಳ್ಳಬಹುದು ಎಂದು ಪರಿಣತರು ಹೇಳಿದ್ದಾರೆ.
ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವುದೇ ಎಂದು ಕೇಳುವುದಲ್ಲ, ಅದು ಯಾವಾಗ ಅಪ್ಪಳಿಸುತ್ತದೆ ಎಂದು ಕೇಳುವುದು ಸರಿಯಾದ ಕ್ರಮ ಎಂದು ಬ್ರಿಟನ್ನ ಬೆಲ್ಫಾಸ್ಟ್ನ ಕ್ವೀನ್ಸ್ ವಿಶ್ವವಿದ್ಯಾನಿಲಯದ ಅಲನ್ ಫಿಝಿಮನ್ಸ್ ಹೇಳುತ್ತಾರೆ.
ಜೂನ್ 30ರಂದು ಆಚರಿಸಲಾಗುವ ಕ್ಷುದ್ರಗ್ರಹ ದಿನಕ್ಕೆ ಪೂರ್ವಭಾವಿಯಾಗಿ ಈ ಎಚ್ಚರಿಕೆ ಹೊರಬಿದ್ದಿದೆ.
1908ರ ಈ ದಿನದಂದು ಸಣ್ಣ ಕ್ಷುದ್ರಗ್ರಹವೊಂದು ಸೈಬೀರಿಯದ ಟಂಗುಸ್ಕದ ಆಕಾಶದಲ್ಲಿ ಸ್ಫೋಟಗೊಂಡು 2,000 ಚದರ ಕಿಲೋಮೀಟರ್ಗೂ ಅಧಿಕ ಪ್ರದೇಶವನ್ನು ನಾಶಪಡಿಸಿತು.
ಇಂಥದೇ ಅನಿರೀಕ್ಷಿತ ಘರ್ಷಣೆ ಇಂದಿನ ಜಗತ್ತಿನಲ್ಲಿ ಬೃಹತ್ ನಗರವೊಂದನ್ನು ಸುಲಭವಾಗಿ ನಾಶಗೊಳಿಸಬಹುದು ಹಾಗೂ ದೊಡ್ಡ ಗಾತ್ರದ ಕ್ಷುದ್ರಗ್ರಹಗಳು ಇನ್ನಷ್ಟು ಅಪಾಯಕಾರಿಯಾಗಿವೆ ಎಂದು ಅಲನ್ ಹೇಳುತ್ತಾರೆ.
Next Story