ಬಿಬಿಸಿ ನಿರೂಪಕನ ಐದು ನಿಮಿಷಗಳ ಮೌನ ಸುದ್ದಿ !
ಹೊಸದಿಲ್ಲಿ, ಜೂ.21: ಸಾಮಾನ್ಯವಾಗಿ ಸುದ್ದಿ ವಾಹಿನಿಗಳು, ತಾಂತ್ರಿಕ ಅಡಚಣೆಯಿಂದಲೂ, ನಿರೂಪಕರು ತಮಗರಿವಿಲ್ಲದೆ ಮಾಡುವ ತಪ್ಪುಗಳಿಂದ ಪೇಚಿಗೀಡಾಗುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಪ್ರಸಿದ್ಧ ಅಂತಾರಾಷ್ಟ್ರೀಯ ವಾಹಿನಿ ಬಿಬಿಸಿಯಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದ್ದು, ಸುಮಾರು 5 ನಿಮಿಷಗಳ ಕಾಲ ನಿರೂಪಕ ಮೌನಕ್ಕೆ ಶರಣಾಗಿದ್ದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
10 ಗಂಟೆಯ ನ್ಯೂಸ್ ಶೋ ಸಂದರ್ಭ ಬಿಬಿಸಿ ನಿರೂಪಕ ಹವ್ ಎಡ್ವರ್ಡ್ಸ್ ಕ್ಯಾಮರಾಗಳು ರೋಲ್ ಆಗುತ್ತಿದ್ದರೂ ಸುದ್ದಿಗಳ ಹೆಡ್ ಲೈನ್ ಪ್ರಸಾರವಾಗುತ್ತಿದ್ದರೂ ಇದರ ಅರಿವಿಲ್ಲದಂತೆ ಮೌನಕ್ಕೆ ಶರಣಾಗಿದ್ದರು. ಬ್ರೇಕಿಂಗ್ ನ್ಯೂಸ್ ಗಳ ಚಿತ್ರಗಳು ಹಾಗೂ ಗ್ರಾಫಿಕ್ ಗಳು ಒಂದೊಂದಾಗಿ ಪ್ರಸಾರವಾಗುತ್ತಿತ್ತು. ಆದರೆ ಇದ್ಯಾವುದರ ಅರಿವೇ ಇಲ್ಲದೆ ಎಡ್ವರ್ಡ್ ಕೆಳಗೆ ನೋಡುತ್ತಾ, ಕೈಗಳನ್ನು ಮಡಚುತ್ತಾ ಸುಮಾರು 5 ನಿಮಿಷಗಳ ಕಾಲ ಮೌನದಿಂದಿದ್ದರು.
ಕೊನೆಗೂ ಬಿಬಿಸಿ ತಪ್ಪನ್ನು ತಿದ್ದಿಕೊಂಡು “ತಾಂತ್ರಿಕ ಸಮಸ್ಯೆಗಳು ಇದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ” ಎಂದು ಸುದ್ದಿ ಪ್ರಸಾರ ಮಾಡಿತು.