ಐಸಿಸ್ ಮುಕ್ತ ಮೊಸುಲ್ನಲ್ಲಿ ಸಡಗರದ ಈದ್
ಮೊಸುಲ್, ಜೂ.26: ನಾಲ್ಕು ವರ್ಷಗಳ ಬಳಿಕ ಐಸಿಸ್ ಉಗ್ರರ ಹಿಡಿತದಿಂದ ವಿಮೋಚನೆಗೊಂಡಿರುವ ಮೊಸುಲ್ನ ಜನತೆ ರವಿವಾರ ಸಂಭ್ರಮದ ಈದ್ ಆಚರಿಸಿದ್ದಾರೆ.
ಈದ್ ದಿನದಿಂದ ಮಹಿಳೆಯರು ಮಕ್ಕಳು ನಗರದ ಪೂರ್ವ ಭಾಗದಲ್ಲಿರುವ ಚೌಕದಲ್ಲಿ ಜಮಾಯಿಸಿ, ಹಬ್ಬದ ಸಡಗರದಲ್ಲಿ ತೇಲಾಡಿದರು. ಕೆಲವು ಚಿಣ್ಣರು ಉಯ್ಯಲೆಯಾಡುತ್ತಿದ್ದರೆ, ಇನ್ನು ಕೆಲವರು ಆಟಿಕೆ ಬಂಧೂಕುಗಳಲ್ಲಿ ಆಡುತ್ತಿರುವ ದೃಶ್ಯ ಕಂಡುಬರುತ್ತಿತ್ತೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 2014 ಜೂನ್ನಲ್ಲಿ ಐಸಿಸ್ ಉಗ್ರರು ಮೊಸುಲ್ ನಗರವನ್ನು ವಶಪಡಿಸಿ ಕೊಂಡಿದ್ದರು. ಆದಾಗ್ಯೂ ಐಸಿಸ್ ಉಗ್ರರು ಮೊಸುಲ್ನಿಂದ ಪಲಾಯನಗೈಯುವ ಮುನ್ನ ಅಲ್ಲಿದ್ದ ಚಾರಿತ್ರಿಕ ಗೋಪುರ (ಮಿನಾರ್) ಒಂದನ್ನು ಸ್ಫೋಟಿಸಿರುವುದು ಅಲ್ಲಿನ ನಿವಾಸಿಗಳಲ್ಲಿ ಅಗಾಧವಾದ ವಿಷಾದವನ್ನುಂಟು ಮಾಡಿದೆ.
ನಾವು ಮನೆಗೆ ಮರಳುವವರೆಗೆ ನಮಗೆ ಈದ್ ನೈಜ ಸಡಗರವನ್ನು ಅನುಭವಿಸಲು ಸಾಧ್ಯವಾಗದು ಎಂದು, ನಗರದ ಸಮೀಪ ಹರಿಯುವ ಟೈಗ್ರಿಸ್ ನದಿಯ ಪಶ್ಚಿಮ ದಂಡೆಯಿಂದ ಸ್ಥಳಾಂತರಗೊಂಡಿರುವ ಇರಾಕಿ ನಾಗರಿಕನೊಬ್ಬ ಹೇಳಿದ್ದಾನೆ. ಆ ಪ್ರದೇಶದಲ್ಲಿ ಇನ್ನೂ ಐಸಿಸ್ ಉಗ್ರರ ಜೊತೆ ಇರಾಕಿ ಪಡೆಗಳು ಕಾಳಗದಲ್ಲಿ ತೊಡಗಿವೆ.
ಇರಾಕಿಪಡೆಗಳು 100 ದಿನಗಳ ಭೀಕರ ಕಾಳಗದ ಬಳಿಕ ಕಳೆದ ಜನವರಿಯಲ್ಲಿ ಮೊಸುಲ್ನ ಪೂರ್ವ ಭಾಗವನ್ನು ಐಸಿಸ್ನಿಂದ ವಿಮೋಚನೆಗೊಳಿಸಿದ್ದವು ಹಾಗೂ ಫೆಬ್ರವರಿಯಲ್ಲಿ ನಗರದ ಪಶ್ಚಿಮ ಭಾಗದ ಮೇಲೆ ದಾಳಿಯನ್ನು ಆರಂಭಿಸಿದ್ದವು. ಇದೀಗ ಉಗ್ರರು ಮೊಸುಲ್ನ ಹಳೆ ನಗರ ಪ್ರದೇಶವನ್ನು ದಿಗ್ಬಂಧನದಲ್ಲಿರಿಸಿದ್ದಾರೆ.