ಜಪಾನ್: ಹಿರೋಶಿಮಾ ದುರಂತದ 72ನೇ ವರ್ಷಾಚರಣೆ
ಟೋಕಿಯೊ,ಆ.6: ಹಿರೋಶಿಮಾ ನಗರದ ಮೇಲೆ ಅಮೆರಿಕ ನಡೆಸಿದ ಅಣುಬಾಂಬ್ ದಾಳಿ 72ನೇ ವರ್ಷಾಚರಣೆಯನ್ನು ರವಿವಾರ ಜಪಾನ್ನಲ್ಲಿ ಸಾಮೂಹಿಕ ಪ್ರಾರ್ಥನೆ, ಸಭಾ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. 1945ರಲ್ಲಿ ಎರಡನೆ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಅಣುಬಾಂಬ್ ದಾಳಿಗೆ ಸಾಕ್ಷಿಯಾದ ಹಿರೋಶಿಮಾದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಶಿಂಜೋ ಅಬೆ ಮಾತನಾಡಿ, ಎಲ್ಲ ದೇಶಗಳ ಸಮ್ಮತಿಯೊಂದಿಗೆ ಅಣ್ವಸ್ತ್ರ ಮುಕ್ತ ಜಗತ್ತು ನಿರ್ಮಾಣಗೊಳ್ಳುವುದೆಂಬ ಆಶಾವಾದವನ್ನು ವ್ಯಕ್ತಪಡಿಸಿದರು.
ಅಣ್ವಸ್ತ್ರಗಳಿಂದ ಹೊರತಾದ ಜಗತ್ತಿಗಾಗಿ ನಾವು ನೈಜ ಪ್ರಯತ್ನ ನಡೆಸುತ್ತಿದ್ದೇವೆ. ಈ ವಿಷಯದಲ್ಲಿ ಅಣ್ವಸ್ತ್ರ ಶಕ್ತ ರಾಷ್ಟ್ರಗಳು ಹಾಗೂ ಅಣ್ವಸ್ತ್ರ ರಹಿತ ರಾಷ್ಟ್ರಗಳ ಸಕ್ರಿಯ ಪಾಲುದಾರಿಕೆಯ ಅಗತ್ಯವನ್ನು ನಾವು ಬಯಸುತ್ತಿದ್ದೇವೆ’’ ಎಂದು ಅಬೆ ಹೇಳಿದ್ದಾರೆ.
ವಿಶ್ವಸಂಸ್ಥೆಯ ಅಣ್ವಸ್ತ್ರ ನಿಷೇಧ ಒಡಂಬಡಿಕೆಯು ಅಣುಶಕ್ತಿಯನ್ನು ಹೊಂದಿರುವ ಹಾಗೂ ಹೊಂದಿರದ ರಾಷ್ಟ್ರಗಳ ನಡುವಿನ ವಿಭಜನೆಯನ್ನು ಇನ್ನಷ್ಟು ಆಳವಾಗಿಸಿದೆಯೆಂದು ಜಪಾನ್ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಅಣ್ವಸ್ತ್ರ ನಿಷೇಧ ಒಡಂಬಡಿಕೆಯ ಕುರಿತ ಮಾತುಕತೆಯಲ್ಲಿ ವಿಶ್ವದ ಒಂಭತ್ತು ಅಣ್ವಸ್ತ್ರ ಶಕ್ತ ರಾಷ್ಟ್ರಗಳು ಪಾಲ್ಗೊಳ್ಳದಿರುವ ಬಗ್ಗೆ ಜಪಾನ್ ಅಸಮಾಧಾನ ವ್ಯಕ್ತಪಡಿಸಿತ್ತು.