ಸಂಬಂಧಿಕರ ಮದುವೆಗಾಗಿ ಹೆಲಿಕಾಪ್ಟರ್ ನಲ್ಲಿ ಬಂದವರು ಸೆಂಟ್ರಲ್ ಜೈಲಿನಲ್ಲಿ ಲ್ಯಾಂಡ್ ಆದರು…!
ಹೊಸದಿಲ್ಲಿ, ಆ.10: ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರೊಂದು ಭಿಗಿ ಭದ್ರತೆಯ ಜೈಲಿನಲ್ಲಿ ಲ್ಯಾಂಡ್ ಆದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಕೂಡಲೇ ಜೈಲಿನ ಭದ್ರತಾ ಸಿಬ್ಬಂದಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದು, ಆದರೆ ಹೆಲಿಕಾಪ್ಟರ್ ನ ಪೈಲಟ್ ತನ್ನ ತಪ್ಪಿನ ಅರಿವಾಗಿ ಹೆಲಿಕಾಪ್ಟರ್ ನೊಂದಿಗೆ ಪರಾರಿಯಾಗಿದ್ದಾನೆ.
ಕಾಶಿಂಪುರ ಸೆಂಟ್ರಲ್ ಜೈಲಿನಲ್ಲಿ ಈ ಘಟನೆ ನಡೆದಿದೆ. “ಇದು ಪ್ರಮಾದದಿಂದ ಘಟಿಸಿದ್ದಾಗಿದೆ. ಆದರೆ ಜೈಲಿನಲ್ಲಿರುವ ಸಹವರ್ತಿಗಳನ್ನು ಬಿಡುಗಡೆ ಮಾಡಲು ಭಯೋತ್ಪಾದಕರು ದಾಳಿ ನಡೆಸಬಹುದು ಎನ್ನುವ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ನಾವು ಕಾರ್ಯಾಚರಣೆ ಕೈಗೊಂಡೆವು” ಎಂದು ಜೈಲಿನ ಇನ್ಸ್ ಪೆಕ್ಟರ್ ಜನರಲ್ ಬ್ರಿಗೇಡಿಯರ್ ಸೈಯದ್ ಇಫ್ತಿಕಾರುದ್ದೀನ್ ಹೇಳಿದ್ದಾರೆ.
ಹೆಲಿಕಾಪ್ಟರ್ ಜೈಲಿನ ನೆಲದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅದನ್ನು ಸುತ್ತುವರಿದು ಪ್ರಯಾಣಿಕರನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದ್ದಾರೆ. ಆದರೆ ಹೆಲಿಕಾಪ್ಟರ್ ಲ್ಯಾಂಡ್ ಆದ ಮರುಕ್ಷಣ ಮತ್ತೆ ಹಾರಿದೆ ಎಂದವರು ಹೇಳಿದ್ದಾರೆ.
ಹೆಲಿಕಾಪ್ಟರ್ ನಿರ್ವಹಣೆಯ ಸಂಸ್ಥೆ ಈ ಬಗ್ಗೆ ಕ್ಷಮೆಯಾಚಿಸಿದೆ ಹಾಗು ದೀರ್ಘ ವಿಚಾರಣೆಯ ನಂತರ ಅದರಲ್ಲಿದ್ದವರನ್ನು ಬಿಡುಗಡೆಗೊಳಿಸಿ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದು ಜೈಲಿನ ಮುಖ್ಯಸ್ಥರು ಹೇಳಿದ್ದಾರೆ.
ಮಲೇಷ್ಯಾದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಯೊಬ್ಬರು ತಮ್ಮ ಕುಟುಂಬಸ್ಥರ ವಿವಾಹದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು ಎನ್ನಲಾಗಿದೆ.