ಉಗ್ರರ ಪಾಲಿಗೆ ಸುರಕ್ಷಿತ ತಾಣ: ಪಾಕ್ಗೆ ಟ್ರಂಪ್ ಖಡಕ್ ಎಚ್ಚರಿಕೆ
ವಾಷಿಂಗ್ಟನ್, ಆ. 22: ಪಾಕಿಸ್ತಾನ ಉಗ್ರರ ಪಾಲಿಗೆ ಸುರಕ್ಷಿತ ತಾಣವಾಗಿರುವುದನ್ನು ಇನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
'ಉಗ್ರಗಾಮಿ ಸಂಘಟನೆಗಳ ಪಾಲಿಗೆ ಪಾಕಿಸ್ತಾನ ಸುರಕ್ಷಿತ ಸ್ವರ್ಗವಾಗಿರುವುದನ್ನು ಮೌನವಾಗಿ ನೋಡಿಕೊಂಡು ಇರಲು ಸಾಧ್ಯವಿಲ್ಲ' ಎಂದು ದಕ್ಷಿಣ ಏಷ್ಯಾಕ್ಕೆ ಹೊಸ ಭದ್ರತಾ ಕಾರ್ಯತಂತ್ರವನ್ನು ಟ್ರಂಪ್ ಘೋಷಿಸಿದರು.
'ಅಪ್ಘಾನಿಸ್ತಾನದಲ್ಲಿ ನಮ್ಮ ಪ್ರಯತ್ನಗಳಿಗೆ ಕೈಜೋಡಿಸುವ ಮೂಲಕ ಪಾಕಿಸ್ತಾನ ಸಾಕಷ್ಟು ಲಾಭ ಪಡೆದಿದೆ. ಆದರೆ ಅಪರಾಧಿಗಳು ಹಾಗೂ ಉಗ್ರರನ್ನು ತಯಾರು ಮಾಡಿ ಕಳುಹಿಸುವುದನ್ನು ಮುಂದುವರಿಸಿದರೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ' ಎಂದು ವಾಷಿಂಗ್ಟನ್ ಸೇನಾ ನೆಲೆಯಲ್ಲಿ ಮಾಡಿದ ದೃಶ್ಯಮುದ್ರಿತ ಭಾಷಣದಲ್ಲಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ತಾನ ಕಡಿವಾಣ ಹಾಕದಿದ್ದರೆ, ವಾಷಿಂಗ್ಟನ್ನ ಆಣ್ವಸ್ತ್ರಸಜ್ಜಿತ ಮಿತ್ರದೇಶಕ್ಕೆ ನೀಡುವ ಎಲ್ಲ ಸೇನಾ ಮತ್ತು ಇತರ ನೆರವಿಗೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.
'ಪಾಕಿಸ್ತಾನಕ್ಕೆ ನಾವು ಕೋಟ್ಯಂತರ ಡಾಲರ್ ನೀಡುತ್ತಿದ್ದೇವೆ. ಇದೇ ವೇಳೆ ನಾವು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೋ ಅಂಥ ಉಗ್ರರಿಗೆ ಅವರು ನೆಲೆ ಒದಗಿಸುತ್ತಿದ್ದಾರೆ. ಅದು ಬದಲಾಗಬೇಕು, ತಕ್ಷಣವೇ ಬದಲಾಗಬೇಕು' ಎಂದು ಟ್ರಂಪ್ ಕಿಡಿ ಕಾರಿದ್ದಾರೆ.
ಪಾಕಿಸ್ತಾನ ನಾಗರೀಕತೆ, ಶಾಂತಿ ಹಾಗೂ ಸುವ್ಯವಸ್ಥೆ ಬಗ್ಗೆ ಬದ್ಧತೆ ಪ್ರದರ್ಶಿಸಬೇಕು ಎಂದು ಸೂಚಿಸಿದ್ದಾರೆ.