ಕಾರಿಗೆ ಆಕಸ್ಮಿಕ ಬೆಂಕಿ: ತಾಯಿ, ಮಗು ಮೃತ್ಯು
ಬೆಂಗಳೂರು, ಫೆ.2: ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ತಾಯಿ ಮತ್ತು ಮಗು ಮೃತಪಟ್ಟಿರುವ ದುರ್ಘಟನೆ ನಗರದ ವೈಟ್ಫೀಲ್ಡ್ ಬಳಿ ನಡೆದಿದೆ.
ನೇಹಾವರ್ಮಾ(40), ಪರಂ(4) ಮೃತಪಟ್ಟವರೆಂದು ಎಂದು ಪೊಲೀಸರು ಗುರುತಿಸಿದ್ದು, ನಗರದ ವೈಟ್ಫೀಲ್ಡ್ ಬಳಿಯ ಬೋರ್ವೆಲ್ ರಸ್ತೆಯ ಸುಮಧುರಾ ಅಪಾರ್ಟ್ಮೆಂಟ್ನ ನೆಲಮಹಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಾರುತಿ ರಿಡ್ಜ್ ಕಾರಿನಲ್ಲಿ ಹೊರಗಡೆ ಹೋಗಿದ್ದ ನೇಹಾವರ್ಮಾ, ಪರಂ, ಮಧ್ಯಾಹ್ನ 12 ಸುಮಾರಿಗೆ ಸುಮಧುರಾ ಅಪಾರ್ಟ್ಮೆಂಟ್ಗೆ ಬಂದಿದ್ದಾರೆ. ಈ ವೇಳೆ ನೆಲಮಹಡಿ ಬಳಿ ಕಾರು ನಿಲ್ಲಿಸಲು ಹೋದಾಗ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಇಬ್ಬರೂ ಕಾರಿನಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಪ್ರಕರಣ ಸಂಬಂಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story