ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಇಲಾಖೆ ಸಜ್ಜು
ಬೆಂಗಳೂರು, ಮೇ 5: ಖಾಸಗಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಆರ್ಟಿಇ ಕಾಯ್ದೆಯಡಿ ದಾಖಲಾಗಿರುವ ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಪಠ್ಯಪುಸ್ತಕ, ಸಮವಸ್ತ್ರ, ಪಠ್ಯೇತರ ಚಟುವಟಿಕೆ, ಲೇಖನ ಸಾಮಗ್ರಿಗಳಿಗೆ ಮಕ್ಕಳ ಪೋಷಕರಿಂದ 20ರಿಂದ 30ಸಾವಿರ ರೂ.ವರೆಗೆ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುತ್ತಿವೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.
ಪತ್ರದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಶಿಕ್ಷಣ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಗಳಿಗೆ ಸುತ್ತೋಲೆ ರವಾನಿಸಿ, ಕಾನೂನು ಬಾಹಿರವಾಗಿ ಶಾಲಾ ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವರದಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇನ್ನು, ಆರ್ಟಿಇ ಕಾಯಿದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮ 2012ರ 23ನೇ ಕಲಂ ಅನ್ವಯ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಹೀಗಾಗಿ, ಮಕ್ಕಳ ಪೋಷಕರಲ್ಲಿ ಗೊಂದಲವನ್ನುಂಟು ಮಾಡದೆ, ಆರ್ಟಿಇ ನಿಯಮದಲ್ಲಿ ಸ್ಟಷ್ಟಪಡಿಸಿರುವ ಎಲ್ಲ ಅಂಶಗಳನ್ನು ಅನುಷ್ಠಾನಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.