ಮಾದಕ ವಸ್ತು ಮಾರಾಟ ಆರೋಪ: ಇಬ್ಬರ ಬಂಧನ, 10 ಕೆಜಿ ಗಾಂಜಾ ಜಪ್ತಿ
ಬೆಂಗಳೂರು, ಅ.3: ಮಾದಕ ವಸ್ತು ಮಾರಾಟ ಆರೋಪದಡಿ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 10 ಕೆಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ಮೋಹನ್ ಮತ್ತು ನಿಖಿಲ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರು, ಒರಿಸ್ಸಾದಿಂದ ಗಾಂಜಾ ತೆಗೆದುಕೊಂಡು, ರೈಲಿನಲ್ಲಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಂಘಟಿತ ರೀತಿಯಲ್ಲಿ ವ್ಯವಸ್ಥಿತವಾಗಿ ಮಾದಕ ವಸ್ತುಗಳಾದ ಗಾಂಜಾ ಒರಿಸ್ಸಾದಿಂದ ಖರೀದಿ ಮಾಡಿ ತಂದು ಅದನ್ನು ಹೆಚ್ಚಿನ ಬೆಲೆಗೆ ನಗರದ ಆರ್.ಟಿ.ನಗರ, ಕಾವಲ್ಬೈರಸಂದ್ರ, ದಿಣ್ಣೂರು, ಚಾಮುಂಡಿನಗರ ಮತ್ತು ಹೆಬ್ಬಾಳ ಸುತ್ತಮುತ್ತ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 10 ಕೆ.ಜಿ. ಗಾಂಜಾ, 2 ಮೊಬೈಲ್ ಫೋನ್, ಬೈಕ್ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story