ಬೆದರಿಕೆ ಆರೋಪ: ದುನಿಯಾ ವಿಜಯ್ ವಿರುದ್ಧ ಪುತ್ರಿ ದೂರು
ದುನಿಯಾ ವಿಜಯ್
ಬೆಂಗಳೂರು, ಅ.23: ನಟ ದುನಿಯಾ ವಿಜಯ್ ಸೇರಿದಂತೆ ಇನ್ನಿತರರು ಮಾರಕಾಸ್ತ್ರಗಳಿಂದ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಅವರ ಪುತ್ರಿ ಮೋನಿಕಾ ಇಲ್ಲಿನ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಬಟ್ಟೆ, ಇತರ ದಾಖಲೆಗಳನ್ನು ಪಡೆಯಲು ಸೋಮವಾರ ಕೀರ್ತಿಗೌಡ ಅವರ ಮನೆಗೆ ಹೋಗಿದ್ದೆ. ಈ ವೇಳೆ ತಂದೆ ವಿಜಯ್, ಅವರ ಪತ್ನಿ ಕೀರ್ತಿ, ವಿನೋದ್, ಕಾರು ಚಾಲಕ ಮುಹಮ್ಮದ್ ಮತ್ತು ಇತರರು ನನಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿ ಪುತ್ರಿ ಆರೋಪಿಸಿರುವುದಾಗಿ ತಿಳಿದುಬಂದಿದೆ.
ಹಲ್ಲೆಯಿಂದ ನನಗೆ ಬಲಗೈಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರಿನಲ್ಲಿ ಹೇಳಲಾಗಿದೆ. ಮೋನಿಕಾಳನ್ನು ತಾಯಿ ನಾಗರತ್ನ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಪುತ್ರಿಯ ಆರೋಪವನ್ನು ತಳ್ಳಿ ಹಾಕಿರುವ ದುನಿಯಾ ವಿಜಯ್, ಪುತ್ರಿಯ ಮೇಲೆ ಹಲ್ಲೆ ನಡೆಸಿಲ್ಲ. ನನ್ನ ವಿರುದ್ಧ ಎಫ್ಐಆರ್ ದಾಖಲು ಮಾಡುವ ದುರುದ್ದೇಶದಿಂದ ಈ ರೀತಿಯ ಆರೋಪ ಮಾಡಲಾಗಿದೆ. ಮೂರು ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.