ಹೇಮಾವತಿ, ಎತ್ತಿನಹೊಳೆ, ಯಗಚಿ ಯೋಜನೆ: ಪರಿಹಾರ ವಿತರಣೆ ಚುರುಕುಗೊಳಿಸಲು ಕುಮಾರಸ್ವಾಮಿ ಸೂಚನೆ
ಬೆಂಗಳೂರು, ಜ. 9: ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆಯನ್ನು ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹೇಮಾವತಿ ಜಲಾಶಯ ಮತ್ತು ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಹಾಗೂ ಯಗಚಿ ಯೋಜನೆಯ ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಹಾಸನ ಜಿಲ್ಲೆಯ ಹೇಮಾವತಿ ಯೋಜನಾ ವ್ಯಾಪ್ತಿಯಡಿ (ಹೇಮಾವತಿ ಮತ್ತು ಯಗಚಿ ಜಲಾಶಯ) ಸುಮಾರು 2,228 ಭೂ ಪಾವತಿ ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳಿಗೆ ಸುಮಾರು 350 ಕೋಟಿ ರೂ. ಮೊತ್ತದ ಭೂ ಪರಿಹಾರ ಪಾವತಿ ಬಾಕಿ ಇವೆ. ಈ ಪೈಕಿ 975 ಎಲ್ಎಸಿ ಪ್ರಕರಣಗಳಿದ್ದು, 94.28 ಕೋಟಿ ರೂ. ಮೊತ್ತವನ್ನು ನ್ಯಾಯಾಲಯಕ್ಕೆ ಠೇವಣಿಗೊಳಿಸುವುದು ಬಾಕಿ ಇರುವುದರಿಂದ ತ್ವರಿತವಾಗಿ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಪರಿಹಾರ ಮೊತ್ತದ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ವೇಯರ್ಗಳ ವಿಶೇಷ ತಂಡವನ್ನು ರಚಿಸಿ ಸಮೀಕ್ಷೆಯನ್ನು ಕೈಗೊಳ್ಳಬೇಕು. ಭೂ ಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ, ಪುನರ್ವಸತಿ ಕಾಯ್ದೆ 2013ರಡಿ ಭೂಸ್ವಾಧೀನಕ್ಕೆ ಪ್ರಕ್ರಿಯೆ ಕುರಿತು ಸಾಮಾಜಿಕ ಪರಿಣಾಮ ಮೌಲ್ಯಮಾಪನವನ್ನು ಕೈಗೊಳ್ಳುವ ಅಗತ್ಯವಿದೆ.
ಈ ಪ್ರಕ್ರಿಯೆಗೆ ಸುಮಾರು 2 ವರ್ಷಗಳ ಕಾಲ ಹಿಡಿಯುವುದರಿಂದ ನೀರಾವರಿ, ಕುಡಿಯುವ ನೀರು, ವಸತಿ ಮತ್ತಿತರ ಸೌಲಭ್ಯಗಳನ್ನು ಪೂರೈಸುವ ಕೆಲಸವನ್ನು ಚುರುಕುಗೊಳಿಸುವುದು ಕಷ್ಟಸಾಧ್ಯ. ಹೀಗಾಗಿ ಸಾಮಾಜಿಕ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಯನ್ನು ಈ ಯೋಜನೆಗಳಲ್ಲಿ ಕೈಬಿಡಲು ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸಲು ಸಿಎಂ, ಅಡ್ವೊಕೇಟ್ ಜನರಲ್ ಗೆ ತಿಳಿಸಿದರು. ಎತ್ತಿನಹೊಳೆ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ವಿಶೇಷ ಭೂ ಸ್ವಾಧಿನಾಧಿಕಾರಿಗಳ ಹುದ್ದೆ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲು ಕ್ರಮ ಕೈಗೊಳ್ಳುವುದು ಎಂದು ಅವರು ತಿಳಿಸಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಶ್ರೀನಿವಾಸಗೌಡ, ಶಿವಲಿಂಗೇಗೌಡ, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಂಸದೀಯ ಕಾರ್ಯದರ್ಶಿ ವೆಂಕಟರಾಮ್, ಕಾನೂನು ಕಾರ್ಯದರ್ಶಿ ಶ್ರೀನಿವಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಸಭೆಯಲ್ಲಿದ್ದರು.