ಗೋಡೆ ಕುಸಿದು ವೃದ್ಧೆ ಮೃತ್ಯು: ಮೂವರಿಗೆ ಗಂಭೀರ ಗಾಯ
ಬೆಂಗಳೂರು, ಜ.18: ಗುಡಿಸಲೊಂದರ ಮೇಲೆ ತಡೆ ಗೋಡೆ ಕುಸಿದು ಬಿದ್ದ ಪರಿಣಾಮ ವೃದ್ದೆಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬೃಂದಾವನ ಲೇಔಟ್ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಮರಿಯಮ್ಮ(70) ವೃತಪಟ್ಟ ವೃದ್ಧೆ ಎಂದು ಪೊಲೀಸರು ಗುರುತಿಸಿದ್ದಾರೆ.
ಹತ್ತು ವರ್ಷದ ಹಿಂದೆ ಆಂಧ್ರದಿಂದ ಕುಟುಂಬದವರೊಂದಿಗೆ ಬೆಂಗಳೂರಿಗೆ ಬಂದಿದ್ದ ಮರಿಯಮ್ಮ ಬೃಂದಾವನ ಲೇಔಟ್ನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಗುಡಿಸಲಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಹಳೆಯ ತಡೆ ಗೋಡೆ ಗುರುವಾರ ತಡರಾತ್ರಿ ಕುಸಿದು ಬಿದ್ದ ಪರಿಣಾಮ ಈ ಅಹಿತಕರ ಘಟನೆ ನಡೆದಿದೆ ಎನ್ನಲಾಗಿದೆ.
ದುರಂತದಲ್ಲಿ ಗಾಢ ನಿದ್ರೆಯಲ್ಲಿದ್ದ ಮರಿಯಮ್ಮ ಸ್ಥಳದಲ್ಲೇ ಮೃತಪಟ್ಟರೆ, ಶಾಂತಮ್ಮ, ಸುರೇಶ್, ಲಕ್ಷ್ಮೀ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಕೆ.ಆರ್.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.