ರಾಜ್ಯದಲ್ಲಿ ಹೂಡಿಕೆ ಮಾಡಲು ಯುಎಇ ಆಸಕ್ತಿ: ಡಾ.ಅಹ್ಮದ್ ಎ.ಆರ್.ಅಲ್ ಬನ್ನಾ
ಬೆಂಗಳೂರು, ಫೆ.18: ಹೊಸದಿಲ್ಲಿಯಲ್ಲಿರುವ ಯುಎಇ ರಾಯಭಾರಿ ಡಾ. ಅಹ್ಮದ್ ಎ.ಆರ್.ಅಲ್ ಬನ್ನಾ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಕರ್ನಾಟಕದಲ್ಲಿ ಆಹಾರ ಭದ್ರತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಕಡಿಮೆ ವೆಚ್ಚದ ವಸತಿ ನಿರ್ಮಾಣ ಯೋಜನೆಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಯುಎಇ ಉತ್ಸುಕವಾಗಿದೆ ಎಂದು ಡಾ.ಅಹ್ಮದ್ ಎ.ಆರ್.ಅಲ್ ಬನ್ನಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಹಲವು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕೃಷಿ, ನೀರಾವರಿ, ಆಟೋ ಮೊಬೈಲ್, ಡಿಜಿಟಲ್ ಮೆಡಿಸಿನ್ ಮುಂತಾದ ವಲಯಗಳಲ್ಲಿ ಯುಎಇ ಮಾಡುತ್ತಿರುವ ಹೂಡಿಕೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ, ಆಹಾರ ಪಾರ್ಕ್ ಮತ್ತು ಕಡಿಮೆ ವೆಚ್ಚದ ಗೃಹ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ರಾಜ್ಯದಿಂದ ಉತ್ತಮ ಗುಣಮಟ್ಟದ ಹೂವು, ಹಣ್ಣು ಮತ್ತು ತರಕಾರಿ ಯೂರೋಪಿಯನ್ ದೇಶಗಳಿಗೆ ರಫ್ತಾಗುತ್ತಿದ್ದು, ಈ ವಲಯಗಳಲ್ಲಿಯೂ ಬಂಡವಾಳ ಹೂಡಿಕೆಯನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ಸಭೆಯಲ್ಲಿ ಮುಖ್ಯಮಂತ್ರಿ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.