ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಯಾವುದೇ ತೊಂದರೆ ಇಲ್ಲ: ಮಾಜಿ ಸಿಎಂ ಎಸ್ಎಂ ಕೃಷ್ಣ
ಬೆಂಗಳೂರು, ಮಾ. 11: ‘ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಯಾವುದೇ ತೊಂದರೆ ಇಲ್ಲ. ಕುಟುಂಬ ರಾಜಕಾರಣ ಮಾಡಬಾರದೆಂದು ಯಾವುದೇ ಕಾನೂನು ಇಲ್ಲ. ಯಾರು ಗೆಲ್ಲಬೇಕೆಂದು ಜನರು ತೀರ್ಮಾನಿಸಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಹೇಳಿದ್ದಾರೆ.
ಸೋಮವಾರ ಇಲ್ಲಿನ ಸದಾಶಿವನಗರದಲ್ಲಿನ ಎಸ್ಎಂ ಕೃಷ್ಣ ಅವರ ನಿವಾಸಕ್ಕೆ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, 25 ವರ್ಷ ವಯಸ್ಸಾಗಿರುವವರು ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಚುನಾವಣೆ ಸ್ಪರ್ಧೆ ಮಾಡುವುದಕ್ಕೆ ಯಾವುದೇ ವಿರೋಧವಿಲ್ಲ. ಸ್ಪರ್ಧಿಸಿದಾಗ ಜನ ತುಲನೆ ಮಾಡುತ್ತಾರೆ. ನಮ್ಮ ಅಭ್ಯರ್ಥಿ ಯಾರೆಂದು ಜನ ನಿರ್ಧರಿಸುತ್ತಾರೆ. ಜತೆಗೆ ಕುಟುಂಬ ರಾಜಕಾರಣ ಮಾಡಬಾರದು ಎಂದು ಯಾವುದೇ ನಿರ್ಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ನಾನು ಬಯಸಿದ್ದೇನೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹೀಗಾಗಿ ನಾನು ರಾಜ್ಯಾದ್ಯಂತ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲವಾದ ನೆಲೆ ಇದೆ. ದೇವೇಗೌಡ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಸಿದ್ಧಾಂತದ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಅವರ ಭರವಸೆ ವ್ಯಕ್ತಪಡಿಸಿದರು.