ನಟಿ ರಮ್ಯಾ 'ಮಾನಸಿಕ ಅಸ್ವಸ್ಥೆ' ಎಂದ ಜಗ್ಗೇಶ್
ಬೆಂಗಳೂರು,ಮಾ.15: ನಟ ಜಗ್ಗೇಶ್ ಮತ್ತು ನಟಿ ರಮ್ಯಾ ನಡುವೆ ಟ್ವೀಟ್ ಸಮರ ನಡೆದಿದ್ದು, ರಮ್ಯಾರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ 'ಆಕೆ ಮಾನಸಿಕ ಅಸ್ವಸ್ಥೆ' ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
‘ಈ ಸಲ ಮತದಾನಕ್ಕೆ ಅರ್ಹರಾಗಿರುವ ಎಲ್ಲರೂ ಹೆಸರು ನೋಂದಾಯಿಸಿಕೊಳ್ಳಿ. ಕಾಲ ಸರಿಯುತ್ತಿದೆ. ಬೇಗ ಹೆಸರು ನೋಂದಾಯಿಸಿಕೊಳ್ಳಿ. ಮತದಾನ ಮಾಡಿ. ಭವಿಷ್ಯ ನಿಮ್ಮ ಕೈಯಲ್ಲಿದೆ’ ಎಂದು ಚಿತ್ರನಟಿ ರಮ್ಯಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಉತ್ತರವಾಗಿ ಚಿತ್ರನಟ ಜಗ್ಗೇಶ್, ‘ಬಾಳುವವರಿಗೆ ಒಂದೆ ಮಾತು! ಬಾಳೆಗೆ ಒಂದೆ ಗೊನೆ! ನಮ್ಮ ಹಳ್ಳಿಯ ಗಾದೆ! ಆಕೆ ಮಾನಸಿಕ ಅಸ್ವಸ್ಥೆ! ಯಾರಿಗೆ ವಂಶವಾಹಿನಿ ಅರಿವಿರುತ್ತದೊ ಅವರು ಜವಾಬ್ದಾರಿ ಮನುಷ್ಯರು! ಮನುಷ್ಯರಿಗೆ ಬುದ್ಧಿ ಹೇಳಬಹುದು, ಮೃಗಕ್ಕೆ ಅಲ್ಲಾ!’ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ರಮ್ಯಾ, ‘ಕಂಡ ಕಂಡೋರಿಗೆ ಮಾನಸಿಕ ಅಸ್ವಸ್ಥರು ಅನ್ನೋ ಕೊಳಕು ಮನಸ್ಸಿನ ಕೊಚ್ಚೆ ಬಾಯಿಯ ಉತ್ತರಕುಮಾರ ಒಬ್ಬನನ್ನ ಇವತ್ತಿಂದ ನಾವು ಪ್ರೀತಿಯಿಂದ ‘ಹುಚ್ಚೇಶ’ ಅಂತ ನಾಮಕರಣ ಮಾಡ್ತೀದೀವಿ. ಹೆಸರು ಇಷ್ಟ ಆದ್ರೆ ಶೇರ್ ಮಾಡಿ’ ಎಂದು ಕುಟುಕಿದ್ದಾರೆ.