ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದರೆ ಗೂಂಡಾ ಕಾಯ್ದೆ
ಬೆಂಗಳೂರು, ಎ.23: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ರಾಜ್ಯದಲ್ಲಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಸೋಲು-ಗೆಲುವು ಕುರಿತು ಬೆಟ್ಟಿಂಗ್ ದಂಧೆ ನಡೆಸಿದರೆ, ಗೂಂಡಾ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ಈ ಸಂಬಂಧ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಮಂಗಳವಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಎರಡು ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದೆ. ಮತ ಎಣಿಕೆ ಕಾರ್ಯ ಮುಂದಿನ ತಿಂಗಳು 23ರಂದು ನಿಗದಿಯಾಗಿದೆ. ಆದರೆ, ಈ ಮಧ್ಯೆ ಕಾಲಾವಕಾಶವಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸೋಲು-ಗೆಲುವು ಕುರಿತು, ಹಲವು ಕಡೆ ಬೆಟ್ಟಿಂಗ್ನಲ್ಲಿ ತೊಡಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಬೆಟ್ಟಿಂಗ್ ಚಟುವಟಿಕೆಗಳ ಮೇಲೂ ಪೊಲೀಸ್ ಇಲಾಖೆ ನಿಗಾ ಇಟ್ಟಿದ್ದು, ಆಯಾ ಜಿಲ್ಲಾ ಮತ್ತು ನಗರ ವ್ಯಾಪ್ತಿಗಳಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಅಕ್ರಮ ಬೆಟ್ಟಿಂಗ್ನಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜೊತೆಗೆ, ಗೂಂಡಾ ಕಾಯ್ದೆ ಅಡಿ ಕ್ರಮಕ್ಕೆ ಮುಂದಾಗುವುದಾಗಿ ನೀಲಮಣಿ ಎನ್.ರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.