ಕೇಂದ್ರ ಸಚಿವರಿಂದ ಕೊಲೆ ಆರೋಪಿಗೆ ಮಾಲಾರ್ಪಣೆ: ಎಸ್ಡಿಪಿಐ ಖಂಡನೆ
ಬೆಂಗಳೂರು, ಮೇ 28: ಜಾನುವಾರು ವರ್ತಕ ಅಲೀಮುದ್ದೀನ್ ಅನ್ಸಾರಿಯವರ ಗುಂಪು ಹಿಂಸಾ ಹತ್ಯಾ ಆರೋಪಿಗೆ ಮಾಲಾರ್ಪಣೆ ಮಾಡಿದ ಘಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ, ಜಾಮೀನಿನ ಮೇಲೆ ಹೊರಬಂದ ಆರೋಪಿಗೆ ಸಿಹಿ ತಿಂಡಿ ತಿನ್ನಿಸಿ ಮಾಲಾರ್ಪಣೆ ಮಾಡಿದ್ದಾರೆ. ಆರೋಪಿಗಳನ್ನು ಈ ರೀತಿಯಲ್ಲಿ ಗೌರವಿಸುವುದು ಫ್ಯಾಶನ್ ಆಗುತ್ತಿದ್ದು, ಸಚಿವರ ಈ ನಡೆ ಆಶ್ಚರ್ಯಕರವಾಗಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ಯಾವ ಸಂದೇಶವನ್ನು ಸಚಿವರು ನೀಡುತ್ತಿದ್ದಾರೆ ಎಂದು ಅವರು ಪ್ರಶಿಸಿದ್ದಾರೆ. ನೆಲದ ಕಾನೂನನ್ನು ಗೌರವಿಸಬೇಕಾದ ಸಚಿವರು ಮತ್ತು ಬಿಜೆಪಿಯು ಸರಕಾರದ ವರ್ಚಸ್ಸಿಗೆ ಕುಂದು ತರುತ್ತದೆ. ಕೇಂದ್ರ ಕೂಡಲೇ ಸಚಿವರನ್ನು ವಜಾ ಮಾಡಬೇಕೆಂದು ಎಂ.ಕೆ.ಫೈಝಿ ಒತ್ತಾಯಿಸಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಗುಂಪು ಹಿಂಸಾ ಹತ್ಯೆಯ ಘಟನೆಗಳು ಜಾರ್ಖಂಡ್ ರಾಜ್ಯದಲ್ಲಿ ಅತೀ ಹೆಚ್ಚು ನಡೆದಿದೆ. ಅಪರಾಧಿಗಳಿಗೆ ಮುಕ್ತ ಸ್ವಾತಂತ್ರ ನೀಡಿ ಸಂತ್ರಸ್ತರಿಗೆ ನ್ಯಾಯ ನಿರಾಕರಿಸಲಾಗುತ್ತಿದೆ. ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿದ್ದರೂ ಗುಂಪು ಹಿಂಸಾ ಆರೋಪಿಗಳು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಸಮಾಜಕ್ಕೆ ತಪ್ಪುಸಂದೇಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಗೋರಕ್ಷಣೆಯ ಹೆಸರಲ್ಲಿ ಅಪರಾಧಿಗಳನ್ನು ಗೌರವಿಸಿ ಧರ್ಮ ರಕ್ಷಕರು ಎಂದು ಬಿಂಬಿಸಲಾಗುತ್ತಿದೆ. ಸಚಿವರ ಈ ಮನಸ್ಥಿತಿ ದೇಶಾದ್ಯಂತ ಅರಾಜಕತೆಗೆ ಮತ್ತು ಹಿಂಸೆಗೆ ದಾರಿ ಮಾಡಿ ಕೊಡುತ್ತಿದೆ ಎಂದು ಎಂ.ಕೆ. ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.