ವಾರದೊಳಗೆ ಆಡಳಿತ ವರದಿ ಸಿದ್ಧಪಡಿಸಿ: ಬಿಬಿಎಂಪಿ ಮೇಯರ್
ಬೆಂಗಳೂರು, ಜು.6: ಬಿಬಿಎಂಪಿ ಆಡಳಿತ ವರದಿಯನ್ನು ಒಂದು ವಾರದೊಳಗಾಗಿ ಸಿದ್ಧಪಡಿಸುವಂತೆ ಪಾಲಿಕೆಯ ಎಲ್ಲ ಭಾಗದ ಮುಖ್ಯಸ್ಥರಿಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಾಕೀತು ಮಾಡಿದ್ದಾರೆ.
ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಎಂಸಿ ಕಾಯ್ದೆ 61(3)ರ ಅಡಿ ಪ್ರತಿವರ್ಷವೂ ಆಡಳಿತ ಮತ್ತು ಲೆಕ್ಕಪರಿಶೋಧನಾ ವರದಿ ಮಂಡಿಸಬೇಕು. ಆದರೆ, ಕಳೆದ 2013-14ರಿಂದ ಇದುವರೆಗೆ ವರದಿ ಮಂಡನೆಯಾಗಿಲ್ಲ. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ ವರದಿ ಮಂಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಎಲ್ಲ ಅಧಿಕಾರಿಗಳೂ ವಾರದೊಳಗಾಗಿ ವರದಿ ಸಿದ್ಧಪಡಿಸಿ ಜಂಟಿ ನಿರ್ದೇಶಕ(ಸಾಂಖ್ಯಿಕ)ರಿಗೆ ಸಲ್ಲಿಸುವಂತೆ ಆದೇಶಿಸಿದರು.
ಅಧಿಕಾರಿಗಳು ಇಲಾಖಾವಾರು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ ವರದಿಯನ್ನು ಸಾಂಖ್ಯಿಕ ವಿಭಾಗಕ್ಕೆ ವಾರದೊಳಗಾಗಿ ಸಲ್ಲಿಕೆ ಮಾಡಬೇಕು. ಬಳಿಕ ಆ ವರದಿಯನ್ನು ಕ್ರೋಡೀಕರಿಸಿ ಕರಡು ಸಿದ್ಧಪಡಿಸಿಕೊಂಡು ಮಾಸಿಕ ಸಭೆಯಲ್ಲಿ ಆಡಳಿತ ವರದಿ ಮಂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
Next Story