ಐಎಂಎ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿಗೆ ಬೇಗ್ ಮೇಲೆ ಏಕಿಷ್ಟು ಪ್ರೀತಿ: ದಿನೇಶ್ ಗುಂಡೂರಾವ್
ಬೆಂಗಳೂರು, ಜು. 16: ‘ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿ ವಂಚನೆ ಪ್ರಕರಣದ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿಗೆ ಇದೀಗ ಶಾಸಕ ಆರ್.ರೋಷನ್ ಬೇಗ್ ಮೇಲೆ ಪ್ರೀತಿ ಏಕೆ ಎಂದು ಗೊತ್ತಾಗುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೋಷನ್ ಬೇಗ್ ಅವರನ್ನು ಬೇರೆ ಕಡೆ ಕರೆದೊಯ್ಯುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ವಿಶೇಷ ವಿಮಾನವನ್ನು ಬುಕ್ ಮಾಡಿಸಿಕೊಟ್ಟು ಕರೆದುಕೊಂಡು ಹೋಗಲು ಬಿಜೆಪಿ ನಾಯಕರೇ ಯತ್ನಿಸಿದ್ದಾರೆ ಎಂದು ದೂರಿದರು.
ಬಿಜೆಪಿ ಅಧಿಕಾರ ಹಿಡಿಯಬೇಕು ಎಂಬ ಕಾರಣಕ್ಕೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಶಾಸಕರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆಂದು ಬಿಜೆಪಿ ನಡೆಯಿಂದಲೇ ಎಲ್ಲರಿಗೂ ಜಗಜ್ಜಾಹಿರಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ್ದು, ಅದರಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ರಾಜ್ಯದ ರಾಜಕೀಯ ಬೆಳವಣಿಗೆ ನಿಂತಿದೆ ಎಂದು ಹೇಳಿದರು.