ಸ್ಪೀಕರ್ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ಜಯ: ಸಿದ್ದರಾಮಯ್ಯ
ಬೆಂಗಳೂರು, ಜು.28: ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ. ಸರಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Next Story