ವಿಧಾನಸೌಧ ಕಚೇರಿಯ ಮೊಹರು ಬಳಕೆ ಆರೋಪ: ಎಫ್ಐಆರ್ ದಾಖಲು
ಬೆಂಗಳೂರು, ಜು.28: ಸೇವೆಯಿಂದ ಅಮಾನತುಗೊಳಿಸಿದ ನಂತರವೂ ವಿಧಾನ ಸೌಧ ಸಚಿವಾಲಯ ಹೆಸರಿನ ಮೊಹರನ್ನು ಬಳಸಿದ್ದ ಆರೋಪದಡಿ ಎಸ್.ಮೂರ್ತಿ ಎಂಬವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
2018ರ ಡಿ.27ರಂದು ಎಸ್.ಮೂರ್ತಿ ಅವರನ್ನು ವಿಶೇಷ ಮಂಡಳಿ ಅನುಮೋದನೆಯಂತೆ ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು. ಆದರೆ, ಆರೋಪಿ ಎಸ್.ಮೂರ್ತಿ ಸೇವೆಯಿಂದ ಅಮಾನತ್ತುಗೊಂಡ ನಂತರವೂ ಕಚೇರಿ ಮೊಹರನ್ನು ಹಿಂತಿರುಗಿಸದೇ ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರಣೆ ಪಟ್ಟಿಯಲ್ಲಿ ಸಚಿವಾಲಯದ ಮೊಹರನ್ನು ಬಳಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸರಕಾರಿ ಸ್ವತ್ತಿನ ಅಪ್ರಮಾಣಿಕ ದುರುಪಯೋಗದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
Next Story