ಬೆಂಗಳೂರು ವಿವಿ ಕುಲಪತಿ ಸಹಿ ನಕಲು: ದೂರು
ಬೆಂಗಳೂರು, ಆ.16: ಉದ್ಯೋಗ ನೀಡುವ ನೆಪದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ಸಹಿಯನ್ನೇ ನಕಲು ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇರ ನೇಮಕಾತಿ ಮೂಲಕ ಬೆಂಗಳೂರು ವಿವಿಯಲ್ಲಿ ದರ್ಜೆ-1 ಅಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿದ್ದರು. ಅಧಿಸೂಚನೆ ಹೊರಡಿಸುವ ಮೊದಲೆ 10 ಜನರಿಗೆ ದರ್ಜೆ-1 ಹುದ್ದೆ ಕೊಡಿಸುವುದಾಗಿ ಹೇಳಿದ್ದ ಮಧ್ಯವರ್ತಿಗಳು, ಇದೀಗ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಇರುವ ಆದೇಶ ಪತ್ರಗಳನ್ನು ಉದ್ಯೋಗಾಂಕ್ಷಿಗಳಿಗೆ ನೀಡಿ ತಲೆಮರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಉದ್ಯೋಗ ದೊರೆತಿದೆ ಎಂದು ನಂಬಿ ನೇಮಕಾತಿ ಆದೇಶ ಪತ್ರ ಹಿಡಿದು ಕೆಲಸದ ಸ್ಥಳಕ್ಕೆ ಹೋದಾಗ ತಾವು ವಂಚನೆಗೊಳಗಾಗಿದ್ದು ತಿಳಿದುಬಂದಿದೆ. ಈ ಸಂಬಂಧ ವಂಚನೆಗೊಳಗಾದ ಅಭ್ಯರ್ಥಿಗಳು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Next Story