ಡಿಕೆಶಿ ಫ್ಲಾಟ್ಗಳ ಮೇಲೆ ಐಟಿ ದಾಳಿ ಪ್ರಕರಣ: ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು, ಆ.20: ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಸೇರಿದ್ದ ಹೊಸದಿಲ್ಲಿಯ ಫ್ಲಾಟ್ಗಳ ಮೇಲೆ ನಡೆದ ಐಟಿ ದಾಳಿಯ ಪ್ರಕರಣ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.
ಡಿಕೆಶಿ ಪರ ವಾದಿಸಿದ ವಕೀಲ, ಐಟಿ ದಾಳಿ ಪ್ರಕರಣದಿಂದ ಕೈಬಿಡುವಂತೆ ಕೋರಿಡಿಕೆಶಿ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ನ್ಯಾಯಾಲಯ ಅರ್ಜಿ ವಜಾ ಮಾಡಿತ್ತು. ಈ ಆದೇಶ ಕಾನೂನು ಬಾಹಿರವಾಗಿದೆ. ಹೀಗಾಗಿ ಈ ಅರ್ಜಿಯನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿದರು. ಈ ವೇಳೆ ನ್ಯಾಯಪೀಠ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಆ.2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಹಾಗೂ ಕರ್ನಾಟಕದ ನಿವಾಸದ ಮೇಲೂ ಐಟಿ ದಾಳಿಯಾಗಿತ್ತು. ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಡಿ.ಕೆ.ಶಿವಕುಮಾರ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಬಳಿಕ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದ್ದರು. ಅಲ್ಲದೆ, ಈ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ದೂರಿನ ವಿಚಾರಣೆ ಅಥವಾ ತನಿಖೆಯನ್ನು ಮುಂದುವರಿಸುವಂತೆ ಆದೇಶ ನೀಡಿತ್ತು. ನಂತರ ಡಿಕೆಶಿ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.