ಬೆಂಗಳೂರು: ಪ್ರತ್ಯೇಕ ರಸ್ತೆ ಅಪಘಾತಕ್ಕೆ ಮೂವರು ಬಲಿ
ಬೆಂಗಳೂರು, ಅ.14: ನಗರ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ ಸಂಬಂಧ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ಕೆಎಸ್ಸಾರ್ಟಿಸಿ ಬಸ್ವೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ತರಕಾರಿ ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿನ ಮರಿಗೌಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರು ಗುಣ(29) ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿರುವ ವಿಲ್ಸನ್ ಗಾರ್ಡನ್ ಸಂಚಾರ ಠಾಣಾ ಪೊಲೀಸರು, ಬಸ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ಗಾರೆಬಾವಿಪಾಳ್ಯದ ಬಸ್ ನಿಲ್ದಾಣದ ಬಳಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಪಶ್ಚಿಮ ಬಂಗಾಳದ ಮೂಲ ಕರಂಲಾಲ್ ಮಹತಾ (31) ಎಂಬುವರು ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಮಡಿವಾಳ ಸಂಚಾರ ಠಾಣಾ ಪೊಲೀಸರು, ಅಪಘಾತವೆಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಕಾಮಾಕ್ಷಿಪಾಳ್ಯದ ಮಾಳಗಾಳದ ಬಳಿ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. ಮಹದೇವ ಸಾಹುಕಾರ್ (48) ಎಂಬುವರು ಮೃತರು ಎಂದು ತಿಳಿದುಬಂದಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.