ರಾಜ್ಯ ಸರಕಾರಿ ನೌಕರರ ತುಟ್ಟಿಭತ್ತೆ ಹೆಚ್ಚಳ
ಬೆಂಗಳೂರು, ಅ. 19: ಸರಕಾರಿ ನೌಕರರಿಗೆ ರಾಜ್ಯ ಸರಕಾರ ದೀಪಾವಳಿ ಹಬ್ಬದ ಉಡುಗೊರೆ ನೀಡಿದ್ದು, ತುಟ್ಟಿಭತ್ತೆ ದರವನ್ನು ಮೂಲವೇತನದ ಶೇ.6.50ರಿಂದ ಶೇ.11.25ಕ್ಕೆ ಹೆಚ್ಚಿಸಿ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ 2019ರ ಜುಲೈ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ತೆ ದರವನ್ನು ಶೇ.6.50ರಿಂದ ಶೇ.11.25ಕ್ಕೆ ಹೆಚ್ಚಳ ಮಾಡಿದ್ದು, ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಶೇ.4.75ರಷ್ಟು ತುಟ್ಟಿಭತ್ತೆ ಹೆಚ್ಚಳ ಮಾಡಲಾಗಿದೆ.
ಸರಕಾರದ ಮತ್ತು ಜಿ.ಪಂ.ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿವಿಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯವಾಗಲಿದೆ.
ಸರಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಹಾಲಿ ಲಭ್ಯವಿರುವ ತುಟ್ಟಿಭತ್ತೆ ದರವನ್ನು ಮೂಲ ನಿವೃತ್ತಿ ವೇತನದ ಶೇ.6.50ರಿಂದ ಶೇ 11.25ಕ್ಕೆ ಹೆಚ್ಚಿಸಲಾಗಿದೆ. 2006ರ ಪರಿಷ್ಕೃತ ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ 2016ರ ಜನವರಿ 1ರ ಪೂರ್ವದಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಈ ಆದೇಶ ಅನ್ವಯಿಸುತ್ತದೆ.