ಸೋಲಿನ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ
ಬೆಂಗಳೂರು, ಡಿ. 9: ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಹೀಗಾಗಿ ಅದರ ನೈತಿಕ ಹೊಣೆ ಹೊತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಉಪಚುನಾವಣೆ ಫಲಿತಾಂಶದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಲುಪಿಸಿದ್ದೇನೆ ಎಂದು ಹೇಳಿದರು.
ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಜನತಾ ನ್ಯಾಯಾಲಯ ಒಳ್ಳೆಯ ತೀರ್ಪು ನೀಡುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಅದಕ್ಕಾಗಿ ಸ್ಥಳೀಯ ಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೆವು. ಅಲ್ಲದೆ, ಬಿರುಸಿನ ಪ್ರಚಾರವನ್ನೂ ಮಾಡಿದ್ದೆವು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಚುನಾವಣೆಯಲ್ಲಿ ಜನರ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಅದಕ್ಕೆ ಬದ್ಧವಾಗಿರುತ್ತೇವೆ. ನಾವು ನಿರೀಕ್ಷಿಸಿದ್ದು ಬೇರೆ, ಜನರ ತೀರ್ಮಾನವೆ ಬೇರೆಯದ್ದಾಗಿದೆ. ಏನೇ ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ಅದನ್ನು ಗೌರವಿಸುತ್ತೇವೆ ಎಂದರು.
ಶಿವಾಜಿನಗರ ಕ್ಷೇತ್ರದಿಂದ ರಿಝ್ವನ್ ಅರ್ಶದ್ ಹಾಗೂ ಹುಣಸೂರು ಕ್ಷೇತ್ರದಿಂದ ಮಂಜುನಾಥ್ ಸೇರಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದು, ಅವರನ್ನು ಅಭಿನಂದಿಸುವೆ ಎಂದರು.
ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನ್ನು ಕಂಡಿತ್ತು. ಆ ವೇಳೆ ನಾನು ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಇದೀಗ ಈ ಉಪಚುನಾವಣೆ ಸಾಕಷ್ಟು ಪಾಠ ಕಲಿಸಿದೆ. ಅದಕ್ಕಾಗಿ ನಾನು ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದು ಅವರು ಸ್ಪಷ್ಟಣೆ ನೀಡಿದರು.
ಪ್ರತಿ ಹಂತದಲ್ಲಿ ಕೆಪಿಸಿಸಿ ನನಗೆ ಬೆಂಬಲ ನೀಡಿದೆ. ಹಿಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದರು. ನಾನು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಚುನಾವಣೆ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಾಗುವುದು ಎಂದರು
ರಾಜ್ಯದ ಹಿತ, ಜನರ ಹಿತಕ್ಕಾಗಿ ಮುಂದೆಯೂ ಕೆಲಸ ಮಾಡುತ್ತೇನೆ. ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ನಾನೇನು ಪಕ್ಷ ಬಿಟ್ಟು ಹೊರಟಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತೀರ್ಮಾನದಂತೆ ಮುನ್ನಡೆಯುತ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.