ಕಾಸರಗೋಡು ಮೂಲದ ಯುವತಿಯ ಅತ್ಯಾಚಾರ, ಮತಾಂತರ ಆರೋಪ: ಡಿಜಿಗೆ ದೂರು ಸಲ್ಲಿಸಿದ ಸಂಸದೆ ಶೋಭಾ
ಬೆಂಗಳೂರು, ಜ.13: ಕಾಸರಗೋಡು ಮೂಲದ ಯುವತಿಗೆ ಅತ್ಯಾಚಾರದ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಮತಾಂತರಕ್ಕೆ ಬಲವಂತ ಮಾಡಿದ ಆರೋಪ ಸಂಬಂಧ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ದೂರು ಸಲ್ಲಿಸಿದ್ದಾರೆ.
ಸೋಮವಾರ ಇಲ್ಲಿನ ನೃಪತುಂಗ ರಸ್ತೆಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಸಂತ್ರಸ್ತ ಯುವತಿಗೆ ನಶೆಯ ಪಾನೀಯ ನೀಡಿದ ದುಷ್ಕರ್ಮಿಗಳು ಮಂಗಳೂರು ಮತ್ತು ಬೆಂಗಳೂರಿನ ಹೊಟೇಲ್ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರದ ದೃಶ್ಯಗಳನ್ನು ಸೆರೆ ಹಿಡಿದು ಮತಾಂತರಕ್ಕೆ ಬಲವಂತ ಮಾಡಿದ್ದಾರೆ. ತಂದೆಯನ್ನು ಬಿಟ್ಟು ತಂಗಿ ಮತ್ತು ತಾಯಿಯೊಂದಿಗೆ ಮತಾಂತರವಾಗುವಂತೆ ಕಾಸರಗೋಡು ಮೂಲದ ಯುವತಿಗೆ ಬಲವಂತ ಮಾಡಲಾಗಿದೆ ಎಂದು ಶೋಭಾ ಆರೋಪ ಮಾಡಿದರು.
ಲೈಂಗಿಕ ಕಿರುಕುಳ ನೀಡಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯ ಮಾಡಿದ್ದಾರೆ.