ಸೋಲುಗಳು ಪಾಠವಾಗಬೇಕು, ಅಭ್ಯಾಸವಾಗಬಾರದು: ದಿಲ್ಲಿಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಶಾಸಕ ಎನ್.ಎ ಹಾರಿಸ್
Photo: facebook/ mlanaharis
ಬೆಂಗಳೂರು, ಫೆ.13: ದೇಶಕ್ಕೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಇದೆ. ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಚಿಂತಿಸುತ್ತಿಲ್ಲ. ಸೋಲುಗಳು ಪಾಠವಾಗಬೇಕು, ಅಭ್ಯಾಸವಾಗಬಾರದು ಎಂದು ಶಾಂತಿನಗರ ಶಾಸಕ ಎನ್.ಎ ಹಾರಿಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿರುವ ಅವರು, ದಿಲ್ಲಿಯಂತಹ ಫಲಿತಾಂಶ ಹಲವಾರು ಬಾರಿ ಬಂದಿದೆ. ಆದರೂ ಈ ಬಗ್ಗೆ ಪಕ್ಷ ಯೋಚನೆ ಮಾಡುತ್ತಿಲ್ಲ. ತನ್ನ ತಪ್ಪುಗಳನ್ನು ತಿದ್ದಿಕೊಳ್ಳದೆ ಇರುವುದು ಯೋಚಿಸಬೇಕಾದ ವಿಚಾರ ಎಂದು ತಿಳಿಸಿದ್ದಾರೆ.
ನಾನೊಬ್ಬ ಕಟ್ಟಾ ಕಾಂಗ್ರೆಸ್ಸಿಗ. ಆದರೆ ಕಾಂಗ್ರೆಸ್ ಪಕ್ಷ ಹಲವಾರು ಸೋಲುಗಳ ನಡುವೆಯೂ ಎಚ್ಚೆತ್ತುಕೊಳ್ಳದೇ ಇರುವುದು ನಿಜಕ್ಕೂ ಆತಂಕಕಾರಿ. ಪಕ್ಷದಲ್ಲಿ ಪದಾಧಿಕಾರಿಗಳು ಇರುವುದು ಯಾವ ಕೆಲಸಕ್ಕಾಗಿ ? ಪಕ್ಷವನ್ನು ಕಟ್ಟುವುದಕ್ಕಾಗಿಯೊ? ಅಥವಾ ತಮ್ಮ ಸ್ವಹಿತಾಸಕ್ತಿಗಳಿಗಾಗಿ ಪಕ್ಷವನ್ನು ಬಲಿ ಕೊಡುವುದಕ್ಕಾಗಿಯೋ ಎಂದು ಪ್ರಶ್ನಿಸಿರುವ ಹಾರಿಸ್, ದಿಲ್ಲಿಯ ಫಲಿತಾಂಶ ಪಕ್ಷದ ಹಿರಿಯ ನಾಯಕರಿಗೆ ಸಂದೇಶವಾಗಬೇಕು ಎಂಬುದು ನನ್ನ ಆಗ್ರಹ ಎಂದು ತಿಳಸಿದ್ದಾರೆ.