ಫ್ಯಾಮಿಲಿ ಮೆಡಿಸಿನ್ ಸ್ನಾತಕೋತ್ತರ ಕೋರ್ಸ್ ಆರಂಭಕ್ಕೆ ಚಿಂತನೆ
ಬೆಂಗಳೂರು, ಫೆ.13: ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್ ಸ್ನಾತಕೋತ್ತರ ಕೋರ್ಸ್ ಆರಂಭಿಸುವ ಮೂಲಕ ಕುಟುಂಬ ವೈದ್ಯ ಪರಿಕಲ್ಪನೆಗೆ ಹೊಸ ರೂಪ ನೀಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮುಂದಾಗಿದೆ.
ವಿದೇಶಗಳಲ್ಲಿ ಕುಟುಂಬ ವೈದ್ಯ (ಫ್ಯಾಮಿಲಿ ಡಾಕ್ಟರ್) ಪರಿಕಲ್ಪನೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಭಾರತದ ಸಹಿತ ಬಹುತೇಕ ರಾಷ್ಟ್ರಗಳಲ್ಲಿ ಇಂದಿಗೂ ಕುಟುಂಬ ವೈದ್ಯರು ಇರುವರಾದರೂ ಅಷ್ಟೊಂದು ವ್ಯವಸ್ಥಿತವಾಗಿ ಸಾಮಾನ್ಯ ಜನರಿಗೆ ಈ ಸೇವೆ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ವೈದ್ಯಕೀಯ ವಿಜ್ಞಾನ ವಿಭಾಗದಿಂದ ಫ್ಯಾಮಿಲಿ ಮೆಡಿಸಿನ್ ಸ್ನಾತಕೋತ್ತರ ಕೋರ್ಸ್ ಆರಂಭಿಸಿ, ಕುಟುಂಬ ವೈದ್ಯರ ಸೇವೆಯನ್ನು ಅತಿ ಸುಲಭವಾಗಿ ಸಾಮಾನ್ಯ ಜನರು ಪಡೆಯುವಂತೆ ಮಾಡಲು ಯೋಜನೆ ರೂಪಿಸಿದೆ.
2020-21ನೇ ಸಾಲಿನಿಂದ ವಿವಿಯು ತನ್ನ ವ್ಯಾಪ್ತಿಯ ಎಲ್ಲ ಕಾಲೇಜುಗಳ ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್ ಕೋರ್ಸ್ ಆರಂಭಿಸುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಸದ್ಯ ವಿವಿಯ ಅಧೀನದಲ್ಲಿರುವ ಕಾಲೇಜುಗಳ ಪೈಕಿ ಕೆಲವೇ ಕೆಲವು ಕಾಲೇಜುಗಳಲ್ಲಿ ಫ್ಯಾಮಿಲಿ ಮೆಡಿಸಿನ್ ಕೋರ್ಸ್ ಇದೆ. ಇದನ್ನು ತಮ್ಮ ವ್ಯಾಪ್ತಿಯ ಎಲ್ಲ ಕಾಲೇಜುಗಳ ಸ್ನಾತಕೋತ್ತರ ವಿಭಾಗದಲ್ಲಿ ಆರಂಭಿಸಲು ವಿವಿಯಿಂದ ನಿರ್ದೇಶ ನೀಡುವ ಸಾಧ್ಯತೆ ಇದೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೋರ್ಸ್ ವಿನ್ಯಾಸ: ವಿವಿ ವ್ಯಾಪ್ತಿಯ ಕಾಲೇಜುಗಳು 2020-21ನೇ ಸಾಲಿಗೆ ಫ್ಯಾಮಿಲಿ ಮೆಡಿಸಿನ್ ಕೋರ್ಸ್ಗೆ ಅರ್ಜಿ ಆಹ್ವಾನಿಸಬೇಕು. ಪ್ರತಿ ಕಾಲೇಜಿಗೆ ವರ್ಷಕ್ಕೆ ನಾಲ್ಕು ಅಭ್ಯರ್ಥಿಗಳನ್ನು ದಾಖಲಿಸಿಕೊಳ್ಳುವ ಅವಕಾಶ ಸಿಗಲಿದೆ. ಎಂಬಿಬಿಎಸ್ ಪೂರೈಸಿದ ಅಭ್ಯರ್ಥಿಗಳು ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್ ಕೋರ್ಸ್ ಸ್ಪೆಷಲೈಸೇಷನ್ ಆಗಿ ಪಡೆದುಕೊಂಡು, ಮೂರು ವರ್ಷಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ. ಸಾಮಾನ್ಯ ಸ್ನಾತಕೋತ್ತರ ಪದವಿಯಂತೆ ಪ್ರಮಾಣಪತ್ರವನ್ನು ವಿವಿಯಿಂದ ನೀಡಲಾಗುತ್ತದೆ. ಪ್ರಮಾಣಪತ್ರ ಪಡೆದವರು ಫ್ಯಾಮಿಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅರ್ಹರಾಗುತ್ತಾರೆ.