ಮಹಿಳೆಯ ಹತ್ಯೆ ಪ್ರಕರಣ: ಆರೋಪಿ ಸೊಸೆ, ಆಕೆಯ ಪ್ರಿಯಕರನ ಸೆರೆ
ಬೆಂಗಳೂರು, ಫೆ.25: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದರೆನ್ನಲಾದ ಅತ್ತೆಯನ್ನು ಕೊಲೆ ಮಾಡಿದ ಆರೋಪದಡಿ ಸೊಸೆ ಮತ್ತು ಅಕೆಯ ಪ್ರಿಯಕರನನ್ನು ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರ ನಿವಾಸಿ ಸೌಂದರ್ಯ(21), ಈಕೆಯ ಪ್ರಿಯಕರ ನವೀನ್(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಟರಾಯನಪುರ ಮುಖ್ಯ ರಸ್ತೆಯ ಮನೆಯಲ್ಲಿ ರಾಜಮ್ಮ(60) ಎಂಬಾಕೆಯನ್ನು ದುಷ್ಕರ್ಮಿಗಳು ತಲೆಗೆ ಬಲವಾಗಿ ಹೊಡೆದು ಫೆ.18ರಂದು ಕೊಲೆ ಮಾಡಿದ್ದರು. ಈ ಸಂಬಂಧ ರಾಜಮ್ಮ ಪುತ್ರ ಕುಮಾರ್ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೌಂದರ್ಯ ಮತ್ತು ನವೀನ್ ನಡುವಿನ ಅನೈತಿಕ ಸಂಬಂಧದ ವಿಚಾರ ರಾಜಮ್ಮನ ಗಮನಕ್ಕೆ ಬಂದಿದ್ದು, ಇದನ್ನು ಪುತ್ರನಿಗೆ ತಿಳಿಸುತ್ತಾರೆ ಎಂದು ಭಾವಿಸಿ ಎಲೆ ಅಡಿಕೆ ಕುಟ್ಟುವ ಕಬ್ಬಿಣದ ತುಂಡಿನಿಂದ ರಾಜಮ್ಮನ ತಲೆಗೆ ಹೊಡೆದು ಕೊಲೆ ಮಾಡಿರುವ ಅಂಶವು ವಿಚಾರಣೆಯ ವೇಳೆ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.