ಗಾಂಜಾ ಮಾರಾಟ: ಐವರ ಬಂಧನ
ಬೆಂಗಳೂರು, ಮಾ.15: ಗಾಂಜಾ ಮಾರಾಟದ ಆರೋಪದ ಹಿನ್ನೆಲೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಐದು ಜನರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮಾದಕ ವಸ್ತು ಮಾರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರ ವಿಭಾಗದ ಪೊಲೀಸರು, ಹಲವು ದಿನಗಳಿಂದ ಗಾಂಜಾ ಮಾರಾಟ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದ ಐವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ದಾದಾಪೀರ್, ಜಾಫರ್ ಸಾಧಿಕ್, ಮುನಾವರ್ ಪಾಷಾ, ಕಾಲಾ ಷರೀಪ್ ಹಾಗೂ ಪರ್ವೀನ್ ತಾಜ್ ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಎರಡೂವರೆ ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೇಂದ್ರ ವಿಭಾಗದ ಸದಾಶಿವನಗರ, ಹೈಗ್ರೌಂಡ್ಸ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಲಾ-ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್ಗಳು, ಪಿಜಿಗಳ ಬಳಿ ಗಾಂಜಾಮಾರಾಟ ಮಾಡುತ್ತಿದ್ದರು. ಈ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಿ, ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.