ಪ್ರೀತಿಸಲು ನಿರಾಕರಸಿದ್ದಕ್ಕೆ ಯುವಕನಿಂದ ಯುವತಿ ಮೇಲೆ ಗಂಭೀರ ಹಲ್ಲೆ
ಬೆಂಗಳೂರು, ಮೇ 27: ಯುವಕನೋರ್ವ ಯುವತಿ ಮೇಲೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಗಿರೀಶ್ ಎಂದು ಗುರುತಿಸಲಾಗಿದ್ದು, ಈತ ಮಂಡ್ಯದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ನಂತರ ಇತ್ತೀಚೆಗೆ ಯುವತಿ ಮಂಡ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಳು.
ಆದರೆ, ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಜಗಳವಾಗಿ ಇಬ್ಬರೂ ದೂರವಾಗಿದ್ದರು. ದೂರವಾದರೂ ಸಹ ಗಿರೀಶ್ ಪ್ರೀತಿಸುವಂತೆ ಆಕೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ, ಯುವತಿ ನಿರಾಕರಿಸಿದ್ದಕ್ಕೆ ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.