ಲಂಚ ಸ್ವೀಕಾರ ಆರೋಪ ಪ್ರಕರಣ: ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಸಿಪಿ ಪ್ರಭುಶಂಕರ್
ಬೆಂಗಳೂರು, ಮೇ 30: ಸಿಗರೇಟ್ ಮಾರಾಟಗಾರರಿಂದ ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್ಐಆರ್ ಗಳನ್ನು ರದ್ದುಪಡಿಸಬೇಕೆಂದು ಕೋರಿ ಸಿಸಿಬಿಯ ಎಸಿಪಿಯಾಗಿದ್ದ ಪ್ರಭುಶಂಕರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕಾಟನ್ಪೇಟೆ ಠಾಣಾ ಪೊಲೀಸರು, ಸಿಸಿಬಿ ಮತ್ತು ಪ್ರಕರಣದ ದೂರುದಾರ ಶಾಜಿ ಜಾರ್ಜ್ ಥಾಮಸ್ ಹಾಗೂ ಆದಿಲ್ ಅಝೀಝ್ ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಹಾಜರಾಗಿದ್ದರು.
ಲಾಕ್ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ನೆರವು ನೀಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ 62.5 ಲಕ್ಷ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಸಿಸಿಬಿ ಎಸಿಪಿಯಾಗಿದ್ದ ಪ್ರಭುಶಂಕರ್ ವಿರುದ್ಧ ಕಾಟನ್ಪೇಟೆ ಠಾಣಾ ಪೊಲೀಸರು ಮೇ 7ರಂದು ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ.